Search By Date & Category

CrimeNEWSನಮ್ಮಜಿಲ್ಲೆ

ಮುಷ್ಕರದ ವೇಳೆ ದಾಖಲಾಗಿದ್ದ ಪ್ರಕರಣ: ಇಂದು BMTCಯ 6 ಮಂದಿ ನೌಕರರ ಪರ ಕೋರ್ಟ್‌ ತೀರ್ಪು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕಳೆದ 2021ರ ಏಪ್ರಿಲ್‌ನಲ್ಲಿ ನಡೆಸಿದ ಮುಷ್ಕರದ ವೇಳೆ ಪೊಲೀಸ್‌ ಪ್ರಕರಣ ದಾಖಲಿಸಿದ್ದ ಬಿಎಂಟಿಸಿ ಅಧಿಕಾರಿಗಳಿಗೆ ಕೋರ್ಟ್‌ನಲ್ಲಿ ಸೋಲಾಗಿದೆ.

ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಮುಷ್ಕರದ ವೇಳೆ ಬಿಎಂಟಿಸಿ ನೌಕರ ಬಸವರಾಜು ಸೇರಿದಂತೆ ಇತರ 6 ಮಂದಿ ನೌಕರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇಂದು ಕೈಗೆತ್ತಿಕೊಂಡ ಮೆಯೋಹಾಲ್‌ನ 10ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಧೀಶರು ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಈ 6ಮಂದಿ ನೌಕರರನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದ್ದಾರೆ.

ಈ ಮೂಲಕ ನೌಕರರ ವಿರುದ್ಧ ಸುಖಾಸುಮ್ಮನೇ ಪೊಲೀಸ್‌ ಕೇಸ್‌ ದಾಖಲಿಸಿ ಕಿರುಕುಳ ನೀಡುತ್ತಿದ್ದ ಬಿಎಂಟಿಸಿ ಅಧಿಕಾರಿಗಳಿಗೆ ನ್ಯಾಯಾಲಯದಲ್ಲಿ ಸೋಲಾಗಿದೆ.

ಬಿಎಂಟಿಸಿ ನೌಕರರ ಪರವಾಗಿ ವಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಅವರು ನೌಕರರು ಏನು ತಪ್ಪು ಮಾಡಿಲ್ಲ, ಆದರೂ ಅವರನ್ನು ಸೇವೆಯಿಂದ ವಜಾಗೊಳಿಸಿದ್ದು ಅಲ್ಲದೆ ಪೊಲೀಸ್‌ ಪ್ರಕರಣಗಳನ್ನು ದಾಖಲಿಸಿದ್ದಾರೆ ಹೀಗಾಗಿ ಅವರ ವಿರುದ್ಧ ಮಾಡಲಾಗಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪ್ರಬಲವಾಗಿ ವಾದ ಮಂಡಿಸಿದರು.

ಇದೇ ವೇಳೆ ಸರ್ಕಾರಿ ಅಭಿಯೋಜಕರು ಪ್ರತಿವಾದ ಮಂಡಿಸಿದರು. ಈ ಎರಡೂ ಕಡೆಯ ವಕೀಲರ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಅಂತಿಮವಾಗಿ ನೌಕರರು ಯಾವುದೇ ತಪ್ಪು ಮಾಡಿಲ್ಲ ಅವರು ನಿರಪರಾಧಿಗಳು ಎಂದು ತೀರ್ಪು ನೀಡಿದ್ದಾರೆ.

Leave a Reply

error: Content is protected !!