ನ್ಯೂಡೆಲ್ಲಿ/ ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ವಂಚಿಸಿದ ಆರೋಪ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೈಸೂರಿನ ಬಿಜೆಪಿ ಮುಖಂಡ ಎಸ್.ಎ.ರಾಮದಾಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ರಾಮದಾಸ್ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ವಜಾಗೊಳಿಸಿತ್ತು. ವಿಚಾರಣೆಗೆ ಅನುಮತಿ ನೀಡಿದ್ದ ಆದೇಶ ಪ್ರಶ್ನಿಸಿ ರಾಮದಾಸ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಹಾಗೂ ನ್ಯಾಯಮೂರ್ತಿ ದೀಪಾಂಕರ ದತ್ತ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಈ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಇದೀಗ, ವಿಶೇಷ ನ್ಯಾಯಾಲಯದ ವಿಚಾರಣೆಗೆ ಹಾದಿ ಸುಗಮವಾಗಿದೆ.
ಪ್ರಕರಣ ತನಿಖೆ ನಡೆಸಿದ್ದ ಸಿಐಡಿ `ಬಿ’ ರಿಪೋರ್ಟ್ ಸಲ್ಲಿಸಿತ್ತು. ತಮ್ಮನ್ನು ಪ್ರಶ್ನೆ ಮಾಡದೇ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿತ್ತು ಎಂದು ಆರೋಪಿಸಿ ದೂರುದಾರೆ ಪ್ರೇಮಾ ಕುಮಾರಿ ಅವರು ಅಂದು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಆ ವೇಳೆ ಜನಪ್ರತಿನಿಧಿಗಳ ನ್ಯಾಯಾಲಯ ‘ಬಿ’ ರಿಪೋರ್ಟ್ ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ರಾಮದಾಸ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ರಾಮದಾಸ್ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ದ್ವಿಸದಸ್ಯ ನ್ಯಾಯಪೀಠ ಜಾಗೊಳಿಸಿರುವುದರಿಂದ ರಾಮದಾಸ್- ಪ್ರೇಮಕುಮಾರಿ ಪ್ರಕರಣಕ್ಕೆ ಮತ್ತೆ ಮರು ಜೀವ ಬಂದಿದೆ. ಈಮೂಲಕ ರಾಮದಾಸ್ಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ.
ಅಂದು ಸಿಐಡಿ ತನಿಖೆ ನಡೆಸಿ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದನ್ನು ಇಂದು ಸುಪ್ರೀಕೋರ್ಟ್ ಎತ್ತಿಹಿಡಿರುವುದರಿಂದ 2014ರಲ್ಲಿ ನಡೆದಿದ್ದ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ.
ಮಾಜಿ ಸಚಿವ ರಾಮದಾಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದರ ಬಗ್ಗೆ ಮಾತನಾಡಿದ ಪ್ರೇಮಕುಮಾರಿ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಕ್ಕೆ ಜಯಸಿಕ್ಕಿದೆ. ಅಲ್ಲದೆ ಹೈ ಕೋರ್ಟ್ ಛೀಮಾರಿ ಹಾಕಿದ್ದರು ಅರ್ಥ ಮಾಡಿಕೊಳ್ಳದೆ ಸುಪ್ರೀಂಕೋರ್ಟ್ಗೆ ಅರ್ಜಿಸಲ್ಲಿಸಿದ್ದರು ಅಲ್ಲಿಯೂ ಕೂಡ ಛೀಮಾರಿ ಹಾಕಿಸಿಕೊಂಡು ಬಂದಿದ್ದಾರೆ. ಇದಕ್ಕೆ ಪ್ರಮುಖವಾಗಿ ನಮ್ಮ ಪರವಾದ ಮಾಡಿದ ವಕೀಲ ಎಚ್.ಬಿ.ಶಿವರಾಜು ಅವರ ಶ್ರಮ ಬಹಳಷ್ಟಿದೆ ಎಂದು ತಿಳಿಸಿದರು.
ಇನ್ನು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ವಕೀಲ ಶಿವರಾಜು ಅವರು ಮಾತನಾಡಿ, ಪ್ರೇಮಕುಮಾರಿ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ವಾದ ಮಂಡಿಸಿದ್ದೆವು ಎರಡೂ ಕಡೆ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ ರಾಮದಾಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ ಎಂದು ಹೇಳಿದರು.
ನಾವು ಸುಪ್ರೀಂ ಕೋರ್ಟ್ನಲ್ಲಿ ಪ್ರೇಮಕುಮಾರಿ ಅವರ ಪರ ಉಚಿತವಾಗಿಯೇ ವಕಾಲತ್ತು ವಹಿಸುವ ಮೂಲಕ ಹೆಣ್ಣು ಮಗಳೊಬ್ಬಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ವಾದ ಮಂಡನೆ ಮಾಡಿದ್ದೆವು. ಈ ಪ್ರಕರಣದ ವಕಾಲತ್ತು ವಹಿಸದಂತೆ ಬಿಜೆಪಿ ಹಲವು ಮುಖಂಡರಿಂದ ಒತ್ತಡವು ಬಂದಿತ್ತು. ಆದರೂ ಅದಕ್ಕೆಲ್ಲ ಕಿವಿಗೊಡದೆ ಪ್ರಕರಣವನ್ನು ಒಪ್ಪಿ ವಕಾಲತ್ತು ಹಾಕಿದೆ ಎಂದು ಶಿವರಾಜು ತಿಳಿಸಿದರು.