
ಬೆಂಗಳೂರು: ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲು ಜಾತಿ ಜನಗಣತಿ ನಾಟಕ ಆಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ ಅವರು, ಜಾತಿ ಜನಗಣತಿ ವರದಿ ಅರ್ಥಹೀನ, ಅದು ಅರ್ಥವಿಲ್ಲದ ವರದಿಯಾಗಿದೆ. ಕಾಂತರಾಜು ಆಯೋಗದ ವರದಿ ಸಿದ್ಧವಾಗಿ 10 ವರ್ಷಗಳಾಗಿವೆ ಈಗ ಅದು ಸರಿಯಾಗಿದೆಯೇ ಎಂದು ಸಿದ್ದರಾಮಯ್ಯ ಜನರು ಒಪ್ಪುವಂತ ಉತ್ತರ ಕೊಡಬೇಕು. ಅದನ್ನು ಬಿಟ್ಟು ಈ ರೀತಿ ಯಾಮಾರಿಸುವುದು ಏಕೆ ಎಂದು ಕಿಡಿಕಾರಿದ್ದಾರೆ.
ಇನ್ನು ಗ್ಯಾರಂಟಿ (ಖಾತರಿಗಳ) ವೈಫಲ್ಯ, ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದಾಗಿ ನಾಡಿನ ಜನರು ತತ್ತರಿಸಿ ಹೋಗಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ, ಜನರ ಗಮನವನ್ನು ಬೇರೆಡೆ ಸೆಳೆಯಲು ಅವರು ಈ ಜಾತಿ ಜನಗಣತಿ ನಾಟಕ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಜಾತಿ ಜನಗಣತಿ ನಡೆಸಬೇಕಾದರೆ, ಹೊಸ ಸಮೀಕ್ಷೆ ನಡೆಸಬೇಕಾಗುತ್ತದೆ. ಅವರು ಹೊಸ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಅದನ್ನು ಬಿಟ್ಟು ಈ 10 ವರ್ಷಗಳ ವರದಿ ಸಲ್ಲಿಸಿದರೆ ಅದರಲ್ಲಿ ಬಹಳಷ್ಟು ಬದಲಾಗಿದೆ. ಈಗ, ನಾವು ಅದನ್ನು ನೋಡಿದರೆ, ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯವನ್ನು ನಾಶಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಜಾತಿ ಸಂಘರ್ಷಕ್ಕಾಗಿ ಸಿದ್ದರಾಮಯ್ಯ ಏನೇನು ಮಾಡಬೇಕೋ ಅದಕ್ಕೆ ಬೇಕಾದ ಎಲ್ಲ ವೇದಿಕೆಗಳನ್ನು ಸಿದ್ದ ಮಾಡಲು ಹೊರಟಿದ್ದಾರೆ. ಅವರು ಬಂದು 2 ವರ್ಷಗಳಾಗಿವೆ. ಅಂದಿನಿಂದ ಅವರು ಏಕೆ ವರದಿ ಜಾರಿ ಮಾಡಲಿಲ್ಲ? ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ನಾಟಕ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.