ನ್ಯೂಡೆಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2025-26ನೇ ಸಾಲಿನಲ್ಲಿ ನಡೆಸುವ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪರೀಕ್ಷೆಗಳು 2026ರ ಫೆಬ್ರವರಿ 17ರಿಂದ ಪ್ರಾರಂಭವಾಗಲಿವೆ. 2024-25ನೇ ಸಾಲಿನ ಪರೀಕ್ಷೆ ಫಲಿತಾಂಶ ಘೋಷಿಸುವಾಗ 2026ರಲ್ಲಿ 10 ಮತ್ತು 12 ನೇ ತರಗತಿಯ ಪರೀಕ್ಷೆಗಳನ್ನು ಫೆಬ್ರವರಿ 17 ರಿಂದ ಪ್ರಾರಂಭೀಸಲಾಗುವುದು ಎಂದು CBSE ಈ ಮೊದಲೇ ಘೋಷಿಸಿತ್ತು.
ಅದರಂತೆ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು NEP-2020ರಲ್ಲಿ ಮಾಡಿದ ಶಿಫಾರಸುಗಳ ಪ್ರಕಾರ ನಡೆಸಲಾಗುವುದು ಎಂದು CBSE ಹೇಳಿದೆ. ಇನ್ನು 10 ಮತ್ತು 12ನೇ ತರಗತಿಯ ನೋಂದಣಿ ಡೇಟಾಗಳ ಆಧಾರದ ಮೇಲೆ, ಸಿಬಿಎಸ್‌ಇ ಮೊದಲ ಬಾರಿಗೆ 2025 ಸೆಪ್ಟೆಂಬರ್ 24ರಂದು 2026ರ ಪರೀಕ್ಷೆಗಳಿಗೆ ತಾತ್ಕಾಲಿಕ ದಿನಾಂಕವನ್ನು ಬಿಡುಗಡೆ ಮಾಡಿತ್ತು.
ಸದ್ಯ ಎಲ್ಲ ಶಾಲೆಗಳು ತಮ್ಮ LOCಯನ್ನು ಸಲ್ಲಿಸಿರುವುದರಿಂದ ಮತ್ತು ಸಿಬಿಎಸ್‌ಇ ಈಗ ವಿದ್ಯಾರ್ಥಿಗಳು ನೀಡುವ ವಿಷಯ ಸಂಯೋಜನೆಗಳ ಅಂತಿಮ ಡೇಟಾವನ್ನು ಹೊಂದಿರುವುದರಿಂದ, 2026ರ ಫೆಬ್ರವರಿ 17ರಿಂದ ನಿಗದಿಯಾಗಿರುವ ಪರೀಕ್ಷೆಗಳಿಗೆ ಸಿಬಿಎಸ್‌ಇ ಡೇಟ್ ಶೀಟ್ ಸಿದ್ಧಪಡಿಸಿದೆ, ಅಂದರೆ ಪರೀಕ್ಷೆಗಳು ಪ್ರಾರಂಭವಾಗುವ 110 ದಿನಗಳ ಮೊದಲು ಇದನ್ನು ನೀಡಲಾಗಿದೆ.
ಒಂದು ಪರೀಕ್ಷೆಯಿಂದ ಇನ್ನೊಂದು ಪರೀಕ್ಷೆ ನಡುವೆ ಸಾಕಷ್ಟು ಅಂತರವನ್ನು ನೀಡಲಾಗಿದೆ ಎಂದು ಸಿಬಿಎಸ್‌ಇ ಹೇಳಿದೆ. 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳ ನಡೆಸುವ ದಿನಾಂಕವನ್ನು ಪರಿಗಣಿಸಲಾಗಿದೆ ಮತ್ತು ಪ್ರವೇಶ ಪರೀಕ್ಷೆಗಳಿಗೂ ಮುಂಚಿತವಾಗಿ ಈ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ವಿವರಿಸಿದೆ.
Related

 










