ಚಿಕ್ಕೋಡಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಇದೇ ಜುಲೈ 6ರಂದು ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದರು.
ಇದೀಗ ದುಷ್ಕರ್ಮಿಗಳು ನಂದಿಪರ್ವತ ಆಶ್ರಮದ ಜೈನಮುನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿದ್ದ ಜೈನಮುನಿ ಜುಲೈ 6ರಂದು ನಾಪತ್ತೆ ಆಗಿದ್ದರು. ಹೀಗಾಗಿ ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಹುಡುಕಾಡಿದ್ದರು. ಬಳಿಕ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.
ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು, ಅನುಮಾನದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಜೈನಮುನಿಯ ಹತ್ಯೆಯ ರಹಸ್ಯ ಬಯಲಾಗಿದೆ.
ಕೆಲವು ವರದಿಗಳ ಪ್ರಕಾರ, ಆಸ್ತಿಗಾಗಿ ಜೈನಮುನಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪೂರ್ಣ ತನಿಖೆ ಬಳಿಕವೇ ಅಸಲಿ ಸತ್ಯ ಬಯಲಾಗಲಿದೆ. ಒಟ್ಟಾರೆ ಮುನಿಗಳನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು ಅವರನ್ನು ಸುಮ್ಮನೆ ಬಿಡಬೇಡಿ ಎಂದು ಭಕ್ತರು ಆಗ್ರಹಿಸಿದ್ದಾರೆ.