
ಬೆಂಗಳೂರು: ನಮ್ಮ ಸರ್ಕಾರ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೆ ಒಂದನೇ ತರಗತಿಗೆ ಸೇರಲು ಅವಕಾಶ ನೀಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಸಂಬಂಧ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಯೋಮಿತಿ ಸಡಿಲಿಕೆ ಮಾಡಲಾಗಿದ್ದು ಪೋಷಕರು ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಶಾಲೆಗೆ ಸೇರಿಸಬಹುದು ಎಂದು ಹೇಳಿದರು.
ವಯಸ್ಸಿನ ಮಿತಿಯ ಬಗ್ಗೆ ಪೋಷಕರು ಗೊಂದಲದಲ್ಲಿದ್ದಾರೆ. ಎರಡು ತಿಂಗಳು ಸಡಿಲಿಕೆ ಮಾಡಬಹುದು. ಈಗಾಗಲೇ ದೇಶದಲ್ಲಿ 1ನೇ ತರಗತಿಗೆ ಸೇರಿಸಲು 6 ವರ್ಷ ವಯೋಮಿತಿ ಇದೆ ಎಂದ ಅವರು, ನಾವು ಈ ವರ್ಷ ಮಾತ್ರ ವಯಸ್ಸಿನ ಮಿತಿಯನ್ನು ಸಡಿಲಿಸಲಿದ್ದು, ಮುಂದಿನ ವರ್ಷದಿಂದ 1ನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷದ ನಿಯಮ ಕಡ್ಡಾಯವಾಗಲಿದೆ ಎಂದು ಹೇಳಿದರು.
ನಾನು SEPಯಿಂದ ವರದಿ ಕೇಳಿದೆ. ಅವರು ಮೊದಲು 6 ವರ್ಷಗಳು ಎಂದು ಹೇಳಿದರು. ನಂತರ ನಮ್ಮ ಇಲಾಖಾ ಅಧಿಕಾರಿಗಳೂ ಅವರೊಂದಿಗೆ ಮಾತನಾಡಿದ ಬಳಿಕ SEPಯ ಸೂಚನೆಗಳ ಮೇರೆಗೆ 5 ವರ್ಷ 5 ತಿಂಗಳು ನಿಗದಿ ಮಾಡಲಾಗಿದೆ ಎಂದು ಹೇಳಿದರು.
ಯುಕೆಜಿ ಪೂರ್ಣಗೊಳಿಸಿರಬೇಕು. 1ನೇ ತರಗತಿಗೆ ದಾಖಲಾತಿ ಮಿತಿಯನ್ನು 5 ವರ್ಷ 5 ತಿಂಗಳುಗಳಿಗೆ ಸಡಿಲಿಸಲಾಗಿದೆ. ಇದು ರಾಜ್ಯ ಪಠ್ಯಕ್ರಮಕ್ಕೆ ಮಾತ್ರ ಅನ್ವಯಿಸುತ್ತದೆ. ಐಸಿಎಸ್‌ಸಿ ಮತ್ತು ಸಿಬಿಎಸ್‌ಇ ಮಂಡಳಿಗಳ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಲು ಆಗೊಲ್ಲ ಎಂದು ಸ್ಪಷ್ಟಪಡಿಸಿದರು.
ವಯಸ್ಸಿನ ಮಿತಿಯನ್ನು ಸಡಿಲಿಸುವಂತೆ ಎಲ್ಲರೂ ಒತ್ತಡ ಹೇರುತ್ತಿದ್ದರು. ಪೋಷಕರು ತಮ್ಮ ಮಕ್ಕಳನ್ನು ಯಂತ್ರದ ರೀತಿ ಓದಿಸುವುದಕ್ಕೆ ಒತ್ತಡ ಹೇರಬಾರದು. ಮಕ್ಕಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಮಕ್ಕಳು ಒತ್ತಡವಿಲ್ಲದೆ ಕಲಿಯಬೇಕು ಎಂದು ಸಲಹೆ ನೀಡಿದರು.