ಬೆಂಗಳೂರು: RCB ವಿಜಯೋತ್ಸವದ ವೇಳೆ ಅದ ಅನಾಹುತಕ್ಕೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ತಲೆದಂಡವಾಗಿದೆ. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜ್ ಅವರನ್ನು ಬಿಡುಗಡೆ ಮಾಡಿ ಬಾಣದರಂಗಯ್ಯ ಆದೇಶ ಹೊರಡಿಸಿದ್ದಾರೆ.
ಇದು ಕೇಂದ್ರ ಸಚಿವರೂ ಆದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಸಿಡಿಸಿದ ಬಾಂಬ್‌ಗೆ ಸರ್ಕಾರ ಹೆದರಿದೆ. ಹೀಗಾಗಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಆದೇಶ ಹೊರಡಿಸಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದ್ದು, ಈಗ ಅದು ಕೂಡ ಭಾರಿ ಚರ್ಚೆಯಾಗುತ್ತಿದೆ.
ಇನ್ನು ಗೋವಿಂದರಾಜ್ ಅವರು ಜೂ. 1. 2023ರಿಂದ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆರ್‌ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಸನ್ಮಾನ ಮಾಡುವಂತೆ ಸಿಎಂಗೆ ಒತ್ತಡ ಹೇರಿದ್ದೇ ಗೋವಿಂದರಾಜ್ ಎಂಬ ಆರೋಪ ಈಗ ಕೇಳಿ ಬಂದಿದೆ.
ಎಚ್‌ಡಿಕೆ ಹೇಳಿದ್ದೇನು?: ಜೂನ್ 4ರ ಬೆಳಗ್ಗೆ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಬೇಕು ಎಂದು ಒತ್ತಡ ಹಾಕುತ್ತಾರೆ. ಇದಕ್ಕೆ ಆಯುಕ್ತರು, ಬೆಳಗ್ಗೆಯವರೆಗೆ ಪೊಲೀಸರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಎರಡು ಮೂರು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಕಷ್ಟವಾಗುತ್ತದೆ. ಒಂದು ಕಡೆ ಕಾರ್ಯಕ್ರಮ ಮಾಡಿದರೆ ಬಂದೋಬಸ್ತ್ ಕಲ್ಪಿಸಲು ಸಾಧ್ಯವಾಗುತ್ತದೆ. ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಆಯುಕ್ತರ ಪ್ರತಿಕ್ರಿಯೆ ಬಳಿಕ ಗೋವಿಂದರಾಜ್ ಸಿಎಂ ಬಳಿಗೆ ಹೋಗುತ್ತಾರೆ. ಸಿಎಂ ಆಯುಕ್ತರನ್ನು ಕರೆಸಿ, ನಾನು ಈ ರಾಜ್ಯದ ಸಿಎಂ. ಆದೇಶ ಮಾಡುತ್ತಿದ್ದೇನೆ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ಕೊಡಿ ಎಂದು ಸೂಚಿಸುತ್ತಾರೆ.
ಹೀಗಾಗಿ ಅನಿವಾರ್ಯವಾಗಿ ಪೊಲೀಸ್ ಕಮಿಷನರ್ ವಿಧಾನಸೌಧಕ್ಕೆ ಬಿಗಿ ಭದ್ರತೆ ಹಾಕುತ್ತಾರೆ. ಆದರೆ ಯಾರಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ಕೊಟ್ಟಿರುವುದಿಲ್ಲ. ಕಾಟಾಚಾರಕ್ಕೆ ಮೂರ್ನಾಲ್ಕು ತುಕಡಿ ಭದ್ರತೆ ಹಾಕಿರುತ್ತಾರೆ. ವಿಧಾನಸೌಧದಲ್ಲೇ ಕಾರ್ಯಕ್ರಮ ಮಾಡಬೇಕು, ನಾನು ಚಿನ್ನಸ್ವಾಮಿಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದ್ದರಿಂದ ಹೆಚ್ಚಿನ ಸಂಖ್ಯೆ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ಎಚ್‌ಡಿಕೆ ಗಂಭೀರ ಆರೋಪ ಮಾಡಿದ್ದರು.

ಅವರು ಸುದ್ದಿಗೋಷ್ಠಿ ಮಾಡಿದ ಬಳಿಕ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
Related

 










