ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳನ್ನೂ ಬಿಜೆಪಿ ನೇತೃತ್ವದ ಸರ್ಕಾರ ಖಾಸಗಿ ಸಂಸ್ಥೆಗೆ ವಹಿಸುವ ಹುನ್ನಾರ ನಡೆಸುತ್ತಿರುವುದು ನಾಡಿನ ಸಾಮಾನ್ಯ ಜನರು ಮತ್ತು ನಿಗಮಗಳ ನೌಕರರ ಮೇಲೆ ಮಾಡುತ್ತಿರುವ ದೌರ್ಜನ್ಯವಾಗಿದೆ ಎಂದು ಕರಾರಸಾರಿಗೆ ನಿಗಮಗಳ ಫೆಡರೇಷನ್. ( CITU) ಅಧ್ಯಕ್ಷ ಎಚ್.ಡಿ. ರೇವಪ್ಪ, ಉಪಾಧ್ಯಕ್ಷ ಡಾ. ಕೆ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್,ಎಸ್ ಮಂಜುನಾಥ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೇಳಿಕೆಯ ವಿವರ: ಸಾರಿಗೆ ಸಚಿವರು 2030 ರೊಳಗೆ ಸಾರಿಗೆ ನಿಗಮಗಳಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸುತ್ತೇವೆ ಎಂದು ಬಿಜೆಪಿ ಸರ್ಕಾರದ ತೀರ್ಮಾನವನ್ನು ಘೋಷಿಸಿದ್ದಾರೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರಿಗೆ ನಿಗಮಗಳ ಮತ್ತು ಸಿಬ್ಬಂದಿಗಳ ಮೂಲಕವೇ ಓಡಿಸುತ್ತೇವೆ ಎಂದು ಹೇಳಿಲ್ಲ. ಸಚಿವರ ಪ್ರಕಾರ ಮತ್ತು ಬಿಜೆಪಿ ಸರ್ಕಾರದ ನೀತಿಗಳ ಪ್ರಕಾರ ಸಾರಿಗೆ ನಿಗಮಗಳ ಎಲ್ಲಾ ಬಸ್ ಡಿಪೋಗಳು ಮತ್ತು ಬಸ್ ನಿಲ್ದಾಣಗಳು ಮತ್ತಿತರೆ ಎಲ್ಲಾ ಆಸ್ತಿಯನ್ನು ಸಂಪೂರ್ಣ ಖಾಸಗೀಯವರಿಗೆ ವಹಿಸಲಾಗುವುದು. ಅಂದರೆ ಸಾರ್ವಜನಿಕ ಸಾರಿಗೆ ನಿಗಮಗಳನ್ನು ಎಲೆಕ್ಟ್ರಿಕ್ ಬಸ್ಸುಗಳ ಮೂಲಕ ಖಾಸಗೀಯವರಿಗೆ ವಹಿಸಲಾಗುವುದು.
ಮೊದಲನೆಯದಾಗಿ ಕಾರ್ಮಿಕರನ್ನು ಸಂಪೂರ್ಣವಾಗಿ ಹೊರದಬ್ಬುವುದು. ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಈಗಿರುವ ಸೌಲಭ್ಯಗಳು ಮುಂದೆ ಇರುವುದಿಲ್ಲ. ಅತೀ ಹೆಚ್ಚಿನ ಬಸ್ ಚಾರ್ಜ್ ನೀಡಬೇಕಾಗುತ್ತದೆ. ಅಂದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಇಲ್ಲದಂತೆ ಮಾಡುವುದೇ ಆಗಿರುತ್ತದೆ.
ಲಕ್ಷಾಂತರ ಕಾರ್ಮಿಕರು ಮದ್ಯಾಂತರ ವಯಸ್ಸಿನಲ್ಲಿ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಎಲ್ಲಾ ಸೌಲಭ್ಯಗಳನ್ನು ಕಡಿತ ಮಾಡುತ್ತಾರೆ. ಗುತ್ತಿಗೆ ಆಧಾರಿತ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಾರೆ. ಸೇವೆಯಲ್ಲಿರುವ ( ಹಾಲಿ ಕರ್ತವ್ಯದಲ್ಲಿರುವ)ಕಾರ್ಮಿಕರಿಗೆ ಬರಬೇಕಾಗಿರುವ ಸೌಲಭ್ಯಗಳ ಹಣವನ್ನು ಸಹ ಸಕಾಲಕ್ಕೆ ನೀಡುವುದಿಲ್ಲ. ಇದರಿಂದ ಸಾರಿಗೆ ಕಾರ್ಮಿಕರು ಈಗಾಗಲೇ ತೀವ್ರತರವಾದ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಬಿಜೆಪಿ ಸರ್ಕಾರದ ಮುಂದುವರೆದ ಖಾಸಗೀಕರಣದ ತೀರ್ಮಾನವು ಇನ್ನೂ ತೀವ್ರತರವಾದ ಸಂಕಷ್ಟಗಳಿಗೆ ಗುರಿಪಡಿಸುವುದು ಮಾತ್ರವಲ್ಲದೆ ಉದ್ಯೋಗಕ್ಕೂ ಸಂಚಕಾರ ತರುತ್ತದೆ.
ಮಂಗಳವಾರ ಸೂರಿ ಭವನದಲ್ಲಿ ನಡೆಯಿತು ಸಭೆ: ಈ ಹಿನ್ನೆಲೆಯಲ್ಲಿ ಸೆ.27 ರಂದು AIRTWF ( ಆಲ್ ಇಂಡಿಯಾ ರೋಡ್ ಟ್ರಾನ್ಪ್ಪೋರ್ಟ್ ವರ್ಕರ್ಸ್ ಫೆಡರೇಷನ್) ರಾಜ್ಯಮುಖಂಡರ ಸಭೆಯು ಬೆಂಗಳೂರಿನ ಸೂರಿ ಭವನದಲ್ಲಿ ನಡೆಯಿತು.
ಈ ಸಭೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಕಾಮ್ರೆಡ್ ಲಕ್ಷ್ಮಯ್ಯ ಮತ್ತು ಕಾರ್ಯದರ್ಶಿಯಾದ ಕಾಮ್ರೇಡ್ ಕುಪ್ಪುಸ್ವಾಮಿಯವರು ಮತ್ತು CITU ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಭಾಗವಹಿಸಿದ್ದರು.
ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಸಚಿವರು ಘೋಷಿಸಿರುವ ಖಾಸಗೀಕರಣದ ತೀರ್ಮಾನವನ್ನು ತೀವ್ರವಾಗಿ ಖಂಡಿಸಲಾಯಿತು. ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ತೀರ್ಮಾನವನ್ನು ವಿರೋಧಿಸಿ ಹೋರಾಟ ನಡೆಸಬೇಕೆಂದು ಕರೆ ನೀಡಲಾಯಿತು.
ಮುಷ್ಕರದ ವೇಳೆ ವಜಾ ಮಾಡಿರುವ ಕಾರ್ಮಿಕರನ್ನು ಪುನರ್ ನೇಮಕ ಮಾಡಬೇಕು. 1-1-2020 ರಿಂದ ವೇತನ ಪರಿಷ್ಕರಣೆ ಮಾಡಬೇಕು. ಸಾರಿಗೆ ಕಾರ್ಮಿಕರ ಮೇಲಿನ ಕಿರುಕುಳಗಳು ನಿಲ್ಲಬೇಕು. ಮತ್ತು ದೌರ್ಜನ್ಯದ ಆಡಳಿತ ತಡೆಗಟ್ಟಬೇಕು. ಮುಂತಾದ ಬೇಡಿಕೆಗಳಿಗಾಗಿ ಚಳುವಳಿಯನ್ನು ರೂಪಿಸಲು ತೀರ್ಮಾನಿಸಲಾಯಿತು.
ಸಾರಿಗೆ ಕಾರ್ಮಿಕರನ್ನು ಮುಂದಿನ ದಿವಸಗಳಲ್ಲಿ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋದಿ ಮತ್ತು ಸಂಸ್ಥೆ ವಿರೋದಿ ನೀತಿಗಳ ವಿರುದ್ಧ ಗಂಬೀರವಾದ ಚಳುವಳಿ ನಡೆಸಲು ಸಜ್ಜುಗೊಳಿಸುವಂತೆ ಕರೆ ನೀಡಲಾಯಿತು. ಕಾರ್ಮಿಕರು ನೈಜತೆಯನ್ನು ಅರಿತು ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.