NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಸಾರಿಗೆ ನೌಕರರಿಗೆ ಕಾಂಗ್ರೆಸ್‌ ಕೊಟ್ಟ ಭರವಸೆ ಸಿಎಂ ಈಡೇರಿಸಬೇಕು: ಸಿಬ್ಬಂದಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಕಾಂಗ್ರೆಸ್‌ ನಾಯಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಶೀಘ್ರವೇ ಈಡೇರಿಸಬೇಕು ಎಂದು ಸಾರಿಗೆ ನೌಕರರು ಒತ್ತಾಯ ಮಾಡಿದ್ದಾರೆ.

ನಮ್ಮ ನಾಲ್ಕೂ ನಿಗಮಗಳಲ್ಲೂ ನೌಕರರ ಕೊರತೆ ಇದೆ. ಇತ್ತ ಕರ್ತವ್ಯ ನಿರ್ವಹಣೆ ಒತ್ತಡದ ನಡುವೆ ಇಂದಿನ  ಬೆಲೆ ಏರಿಕೆ ದಿನಗಳಲ್ಲಿ ಕನಿಷ್ಠ ವೇತನವೂ ಇಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗುತ್ತಿರುವುದರಿಂದ ಖಿನ್ನತೆಗೆ ಜಾರುತ್ತಿರುವ ಸಾರಿಗೆ ನಿಗಮಗಳ ನೌಕರರ ಬದುಕು ಪ್ರಸ್ತುತ ಅನಿಶ್ಚಿತತೆಯಿಂದ ಕೂಡಿದೆ.

ನಾಲ್ಕೂ ನಿಗಮಗಳು ಅಭಿವೃದ್ಧಿ ಪಥದ ಸಂಕೇತವಾಗಿವೆ. ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ ಮತ್ತು ವಾಯವ್ಯ ಸೇರಿ ರಾಜ್ಯದಲ್ಲಿ ಈ ಹಿಂದೆ ಸುಮಾರು 1.25 ಲಕ್ಷ ನೌಕರರು ಇದ್ದರು ಪ್ರಸ್ತುತ ಈ ಸಂಖ್ಯೆ ಗಣನೀಯವಾಗಿ ಕುಸಿದಿದ್ದು ಈಗ ಸುಮಾರು 1.06 ಲಕ್ಷ ನೌಕರರಿದ್ದಾರೆ.

ಇವರೆಲ್ಲ ನಾನಾ ಹಂತದಲ್ಲಿ ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ, ತಾಯಿ, ಹೆಂಡತಿ, ಮಕ್ಕಳು ಇಡೀ ಕುಟುಂಬವನ್ನು ಬಿಟ್ಟು ಹಗಲಿರುಳೆನ್ನದೆ ಜೀವದ ಹಂಗು ತೊರೆದು, ನಾಡಿನ ಜನರನ್ನು ಸುರಕ್ಷಿತವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವಲ್ಲಿ ನಿರತರಾಗಿದ್ದಾರೆ.

ಪ್ರಸ್ತುತ ಸಂಸ್ಥೆಯಲ್ಲಿ ಕರ್ತವ್ಯ ನಿರತ ಬಹುತೇಕ ಸಿಬ್ಬಂದಿ ಸ್ಥಿತಿವಂತರಲ್ಲ. ಕುಟುಂಬ ನಿರ್ವಹಣೆ ಹಾಗೂ ತುತ್ತಿನ ಚೀಲ ತುಂಬಿಕೊಳ್ಳಲು ಬಂದ ಬಹುತೇಕರು ಮಧ್ಯಮ ವರ್ಗ, ಕೃಷಿ ಇಲ್ಲವೇ ಬಡ ಕುಟುಂಬದ ಹಿನ್ನೆಲೆ ಹೊಂದಿದವರಾಗಿದ್ದಾರೆ. ಹೀಗಾಗಿ ಇವರೆಲ್ಲರೂ ಸಂಸ್ಥೆಯ ಮೇಲೆಯೇ ಅವಲಂಬಿತರಾಗಿದ್ದಾರೆ.

ಈ ನಡುವೆ ಇಚ್ಛಾಶಕ್ತಿ ಕೊರತೆಯಿಂದ ಸಾರಿಗೆ ಸಂಸ್ಥೆಗಳು ಹತ್ತಾರು ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದೆ. ವೇತನ ಹೆಚ್ಚಳದ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಮಾಡಿದ್ದೆವು. ಆದರೆ ಆ ವೇಳೆ ಇದ್ದ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಲಿಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಒಂದಿಲ್ಲೊಂದು ಕಷ್ಟವನ್ನು ಎದುರಿಸುತ್ತಲೇ ಬರುತ್ತಿದ್ದೇವೆ.

ಈ ಎಲ್ಲದರ ನಡುವೆ ನಿವೃತ್ತರಾಗುತ್ತಿರುವ ಸಿಬ್ಬಂದಿ ಜಾಗಕ್ಕೆ ಮತ್ತೆ ಹೊಸ ನೌಕರರನ್ನು ತೆಗೆದುಕೊಳ್ಳದ ಕಾರಣ ಈಗ ಸಂಸ್ಥೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಕಳೆದ ಕೆಲ ವರ್ಷಗಳಿಂದಲೂ ಚಾಲಕ, ನಿರ್ವಾಹಕ, ತಾಂತ್ರಿಕ ಹಾಗೂ ಇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ನನೆಗುದಿಗೆ ಬಿದ್ದಿದೆ.

ಇನ್ನು ಸರ್ಕಾರ ಮತ್ತು ಸಂಸ್ಥೆಯ ವಿಳಂಬ ನೀತಿಯಿಂದ ಸಿಬ್ಬಂದಿಗೆ ನಿತ್ಯವೂ ಕರ್ತವ್ಯದ ಭಾರ ಹೆಚ್ಚುತ್ತಿದೆ. ಬೆಳಗಾದರೆ ಸಾಕು ಸಿಬ್ಬಂದಿ ಯಂತ್ರದ ಜತೆಗೆ ತಾವೂ ಯಂತ್ರವಾಗಿಯೇ ಕರ್ತವ್ಯ ನಿರ್ವಹಿಸಬೇಕಿದೆ. ವಿಶ್ರಾಂತಿ ರಹಿತ ಕರ್ತವ್ಯ, ಅಕಾಲಿಕ ಆಹಾರ ಸೇವನೆ, ನಿದ್ದೆಗೆಡುವುದರಿಂದ ಸಿಬ್ಬಂದಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಆದರೂ ಡ್ಯೂಟಿಗೆ ಬರಲೇ ಬೇಕು ಎಂಬ ಒತ್ತಡವೂ ಅಧಿಕಾರಿಗಳ ಕಡೆಯಿಂದ ಇದೆ.

ಇದರಿಂದಾಗಿ ಇತ್ತೀಚೆಗೆ ಮಧ್ಯ ವಯಸ್ಕ ಸಿಬ್ಬಂದಿ, ಅದರಲ್ಲೂ ಚಾಲಕ, ನಿರ್ವಾಹಕರು ಕರ್ತವ್ಯ ನಿರ್ವಹಣೆಯಲ್ಲಿಯೇ ಹೃದಯಾಘಾತದಂತಹ ಅಕಾಲಿಕ ರೋಗಗಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಇದರಿಂದ ಅದೆಷ್ಟೋ ಕುಟುಂಬಗಳು ಅನಾಥವಾಗಿವೆ.

ಇನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮನಸೋ ಇಚ್ಛೆ ನಿಗದಿ ಮಾಡುತ್ತಿದ್ದ ವೇತನ ಪರಿಷ್ಕರಣೆಯೂ ಕೊರೊನಾ, ನೌಕರರ ಮುಷ್ಕರದ ನೆಪ್ಪವೊಡ್ಡಿ ಕಳೆದ 2020ರಿಂದ ಕೋಮಾ ಸ್ಥಿತಿ ತಲುಪಿತ್ತು. ಆದರೀಗ ಶೇ.15ರಷ್ಟು ಕೊಟ್ಟು ಅಂದಿನ ಸರ್ಕಾರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾಡಿದೆ. ಇನ್ನು ಮತ್ತೊಂದು ವೇತನ ಪರಿಷ್ಕರಣೆ ಅವಧಿ ಬಂದಿದೆ. ಹೀಗಾಗಿ ನಮಗೆ ನೀವು ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ನಡೆದುಕೊಂಡು ನಮಗೂ ಸರಿ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮ ಸಿಟ್ಟು ನೋವನ್ನು ಹೊರಹಾಕಲಾಗದ ಸ್ಥಿತಿಯಲ್ಲಿ ಕುಟುಂಬ ನಿರ್ವಹಣೆಗಾಗಿ ಕಡಿಮೆ ಸಂಬಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ದುಬಾರಿ ದುನಿಯಾದಲ್ಲಿ ದಿನನಿತ್ಯ ಬೆಲೆ ಏರಿಕೆಯ ವ್ಯವಸ್ಥೆಯಲ್ಲಿ ಕಡಿಮೆ ವೇತನದಿಂದ ಕುಟುಂಬ ನಿರ್ವಹಣೆ ಸಾಧ್ಯವಾಗದೆ ಬಳಲುತ್ತಿದ್ದೇವೆ.

ಹಲವು ಕಷ್ಟಗಳ ನಡುವೆಯೂ ನಿಷ್ಠೆಯಿಂದ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಕಣ್ಣೀರಲ್ಲಿ ಸಂಸ್ಥೆಯ ನೌಕರರು ಕೈ ತೊಳೆಯುತ್ತಿದ್ದರೂ ಜನರ ಸೇವೆಯನ್ನು ಮಾತ್ರ ನಿಲ್ಲಿಸಿಲ್ಲ. ಇದನ್ನು ನೋಡಿಯಾದರೂ ನಿಮ್ಮ ಸರ್ಕಾರ ನಮಗೆ ಸರಿ ಸಮಾನ ವೇತನ ಕೊಡುವ ಮೂಲಕ ನಾವು ಜನಸೇವಕರು ಎಂಬುದನ್ನು ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು