ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ರಾಜ್ಯದ ಜನ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿಎಂ ತಮ್ಮ ಬಜೆಟ್‌ನಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ನೀಗಿಸಲು ಮೇಕೆದಾಟು ಯೋಜನೆ ಪ್ರಾರಂಭಿಸುವುದಾಗಿ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ಬಗ್ಗೆ ಬಜೆಟ್‌ನಲ್ಲಿ ಏನೂ ಮಾತನಾಡಿಲ್ಲ. ಅಧಿಕಾರಕ್ಕೆ ಬರುವ ಮುನ್ನ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಈಗ ಸುಮ್ಮನಿರುವುದು ಏಕೆ ಎಂದು ಪ್ರಶ್ನೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕನ್ನಡಪರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಕನ್ನಡದ ಬಗ್ಗೆ ಬಜೆಟ್‌ನಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ, ಕೇಂದ್ರ ಸರ್ಕಾರ ಬರಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸುತ್ತಾ ಕಾಲ ಕಳೆಯುತ್ತಿರುವ ರಾಜ್ಯ ಸರ್ಕಾರ, ಬಜೆಟ್‌ನಲ್ಲಿ ಬರ ಪರಿಹಾರ ಮೊತ್ತವನ್ನು ಏಕೆ ಹೆಚ್ಚಿಸಲ್ಲ. ₹2000 ನೀಡಿದರೆ ರೈತರಿಗೆ ಏನು ಪ್ರಯೋಜನ ಎಂದರು.
147 ಕಿಮೀ ವೈಟ್ ಟಾಪಿಂಗ್ ಯೋಜನೆಗೆ ₹1700 ಕೋಟಿ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಚಂದ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೈಟ್ ಟಾಪಿಂಗ್ ಹೆಸರಿನಲ್ಲಿ ಈಗಾಗಲೇ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈಗ ಹಣ ಹೊಡೆಯುವ ಉದ್ದೇಶದಿಂದ ವೈಟ್ ಟಾಪಿಂಗ್‌ಗೆ ಅನುದಾನ ನೀಡಲಾಗಿದೆ ಎಂದರು.
ಸುರಂಗ ರಸ್ತೆ ನಿರ್ಮಾಣಕ್ಕೆ ಆಮ್ ಆದ್ಮಿ ಪಾರ್ಟಿ ಮೊದಲಿಂದ ವಿರೋಧ ವ್ಯಕ್ತಪಡಿಸಿದೆ. ಸುರಂಗ ಮಾರ್ಗ ಅವೈಜ್ಞಾನಿಕ ಎಂದು ಹೇಳಿದ್ದರೂ, ಲಜ್ಜೆಗೆಟ್ಟ ಸರ್ಕಾರ ಭ್ರಷ್ಟಾಚಾರ ಮಾಡಲು, ವಿರೋಧವನ್ನು ಲೆಕ್ಕಿಸದೇ ಸುರಂಗ ಮಾರ್ಗ ಯೋಜನೆ ಕೈಗೆತ್ತಿಕೊಂಡಿದೆ ಎಂದು ಅವರು ಟೀಕಿಸಿದರು.
ಕಳಸ ಬಂಡೂರಿ ಯೋಜನೆ ಹಾಗೂ ನವಲಿ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ರಾಜ್ಯದ ಪಾಲನ್ನು ಇನ್ನು ಘೋಷಿಸಿಲ್ಲ. ನೀರಾವರಿ ಯೋಜನೆಗಳ ಆರ್ಥಿಕ ಸಂಪನ್ಮೂಲಗಳ ವಿವರಗಳನ್ನು ನೀಡಿಲ್ಲ ಎಂದರು.
ಶಿಕ್ಷಣ, ಆರೋಗ್ಯ ಕ್ಷೇತ್ರದ ಕಡೆಗಣನೆ: ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಕದ್ದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ಕಡೆಗಣಿಸಲಾಗಿದೆ ಎಂದರು.
ಈ ಬಾರಿ ₹27,353 ಕೋಟಿ ರಾಜಸ್ವ ಕೊರತೆ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿ ಕೊಡಲು ಹಣ ಹೊಂದಿಸಲು ಆಗದ ಮೇಲೆ ಆಮ್ ಆದ್ಮಿ ಪಾರ್ಟಿಯ ಯೋಜನೆಗಳನ್ನು ಕಾಪಿ ಮಾಡಬಾರದಿತ್ತು ಎಂದರು. ದೆಹಲಿ ಸರ್ಕಾರ ಎಲ್ಲಾ ಉಚಿತಗಳನ್ನು ನೀಡಿದರೂ ಉಳಿತಾಯ ಬಜೆಟ್ ಮಂಡಿಸಿದೆ. ಭ್ರಷ್ಟಾಚಾರ ತೊಲಗಿಸಿದಿರೆ ರಾಜ್ಯದ ಜನರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಬಹುದು ಎಂದರು.
ಸಿಎಸ್ಆರ್ ಅನುದಾನ ನಂಬಿಕೊಂಡು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುವುದಾಗಿ ಹೇಳಿರುವುದು ದುರಂತ. ಗುಣಮಟ್ಟ ಶಾಲಾ ಕೊಠಡಿ ನಿರ್ಮಾಣದ ಘೋಷಣೆ ಮಾಡಿಲ್ಲ. ಪ್ರೌಢಶಾಲೆಗಳ ಉನ್ನತಿಕರಣಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹಣವನ್ನು ಆಶ್ರಯಿಸುತ್ತಿದ್ದಾರೆ ಇದು ಸರಕಾರದ ಬಳಿ ಹಣವಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದರು.
ಮಹಿಳಾ ಪಾಲಿಟೆಕ್ನಿಕ್ ಉನ್ನತೀಕರಣಕ್ಕೆ 30 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದ 20 ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗಾಗಿ ₹10 ಕೋಟಿ ನೀಡಿರುವುದು ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದರು.
ಕೇವಲ 15 ಜಿಲ್ಲೆಗಳಿಗೆ ಮಾತ್ರ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ ಮಾಡುತ್ತಿದ್ದು ಉಳಿದ ಜಿಲ್ಲೆಗಳಿಗೆ ಅನ್ಯಾಯ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಪ್ರತ್ಯೇಕ ಕ್ಯಾನ್ಸರ್ ಆಸ್ಪತ್ರೆಗಳ ಬಗ್ಗೆಯೂ ಘೋಷಣೆ ಮಾಡಿಲ್ಲ, ಇದು ಕಾಂಗ್ರೆಸ್ ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದರು.
ಗ್ಯಾರಂಟಿಗಳಿಗೆ ಹಣ ಹೊಂದಿಸುವ ಸಲುವಾಗಿ ಮುದ್ರಾಂಕ ಶುಲ್ಕ ಹೆಚ್ಚಿಸಲಾಗಿದೆ. ಈಗ ಅಬಕಾರಿ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಹೊರೆ ಹೆಚ್ಚಿಸಿದೆ ಎಂದರು.