ಬೆಂಗಳೂರು: ಸಾರಿಗೆ ನೌಕರರಿಗೆ ಸರ್ಕಾರ ಶುಕ್ರವಾರ ರಾತ್ರಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಜಂಟಿ ಕ್ರಿಯಾ ಸಮಿತಿ ಇದೇ ಮಾ.21ರಿಂದ ಹಮ್ಮಿಕೊಂಡಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಸಂಜೆ 4 ಗಂಟೆಯಿಂದ ರಾತ್ರಿ ಸುಮಾರು 9.30ರವರೆಗೂ ಶಾಂತಿನಗರದಲ್ಲಿರುವ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಎಂಡಿ ಮತ್ತು ಸಾರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ಸುದೀರ್ಘವಾಗಿ ನಡೆದ ಗೌಪ್ಯಸಭೆಯಲ್ಲಿ ಸರ್ಕಾರ ಶೇ.17ರಿಂದ ಶೇ.20ರಷ್ಟು ವೇತನ ಹೆಚ್ಚಳ ಮಾಡುವ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.
ಅಲ್ಲದೆ 1/1/2020ರಿಂದ ಈ ವೇತನ ಹೆಚ್ಚಳ ಜಾರಿಗೆ ಬರುವಂತೆ ನಾಳೆ ಬೆಳಗ್ಗೆ ಅಥವಾ ಸೋಮವಾರ (ಮಾ.20) ಆದೇಶವನ್ನು ಸರ್ಕಾರ ಹೊರಡಿಸಲಿದೆ ಎಂದು ತಿಳಿದು ಬಂದಿದೆ. ಅಂದರೆ ನಿನ್ನೆ (ಮಾ.17) ರಾತ್ರಿ ಸರ್ಕಾರ ಹೊರಡಿಸಿದ್ದ ಶೇ.15ರಷ್ಟು ವೇತನ ಹೆಚ್ಚಳವನ್ನು ವಾಪಸ್ ಪಡೆದು ಮತ್ತೆ ಶೇ.17ರಿಂದ20ರವರೆಗೆ ಹೆಚ್ಚಿಸಿ ಆದೇಶ ಹೊರಡಿಸಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಪ್ರಮುಖವಾಗಿ 2021 ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ನೌಕರರು ಮತ್ತು ಅವರ ಕುಟುಂಬದವರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನೆಲ್ಲ ವಾಪಸ್ ಪಡೆಯುವುದಾಗಿ ದೂರವಾಣಿ ಮೂಲಕ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರ ಜತೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಪ್ಪಿಕೊಂಡಿದ್ದು, ಎಫ್‌ಐಆರ್ ಆಗಿರುವ 57 ನೌಕರರಿಗೂ ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು ಎಂಬ ಒತ್ತಾಯಕ್ಕೂ ಸರ್ಕಾರ ಮಣಿದಿದೆ ಎಂದು ತಿಳಿದು ಬಂದಿದೆ.
ಅಲ್ಲದೆ 1 ಜನವರಿ 2020ರಿಂದ ವೇತನ ಹೆಚ್ಚಳ ಜಾರಿಗೆ ಬರುವಂತೆ ಆದೇಶ ಮಾಡಬೇಕು. ಜತೆಗೆ ಏನು ಈ 38 ತಿಂಗಳ ಹಿಂಬಾಕಿಯನ್ನು ಕೊಡಬೇಕು ಎಂದು ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಕೇಳಿದ್ದಕ್ಕೆ ಎಂಡಿ ಅವರು ಸರ್ಕಾರ ಒಪ್ಪಿಕೊಂಡಿದ್ದು ನಾವು 1/1/2020ರಿಂದಲೇ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡುತ್ತೇವೆ, ಜತೆಗೆ ಹಿಂಬಾಕಿಯನ್ನು ಕೊಡುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಇದೇ ಮಾ.21ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರವನ್ನು ಕೈ ಬಿಡಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ಘೋಷಣೆ ಮಾಡಿದ್ದು, ಯುಗಾದಿಗೆ ನೌಕರರಿಗೆ ಸಿಹಿ ಸುದ್ದಿ ನೀಡುವ ಜತೆಗೆ ಹಬ್ಬಕ್ಕೆ ದೂರದೂರಿಗೆ ಹೋಗುವ ಪ್ರಯಾಣಿಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಒಪ್ಪಿಕೊಂಡಿರುವುದು ಸಂತಸ ತಂದಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.