ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳನ್ನು ದುರಸ್ತಿಗೊಳಿಸಿ ಸುಗಮ ಪಾದಚಾರಿಗಳನ್ನು ನಿರ್ಮಾಣ ಮಾಡಲು ಯಲಹಂಕ ವಲಯ ಆಯುಕ್ತ ಕರೀಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಲಯದ ಸಂದೀಪ್ ಉನ್ನಿ ಕೃಷ್ಣನ್ ರಸ್ತೆಯಲ್ಲಿ ಇಂದು ಪಾದಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಿದ ಅವರು, ಪಾದಚಾರಿ ಮಾರ್ಗದಲ್ಲಿ ಇರುವ ಸಮಸ್ಯೆಗಳನ್ನು ಒಂದು ವಾರದೊಳಗಾಗಿ ದುರಸ್ತಿಗೊಳಿಸಿ ಛಾಯಾಚಿತ್ರದೊಂದಿಗೆ ವರದಿ ನೀಡಲು ಸೂಚಿಸಿದರು.
ಪಾದಚಾರಿ ಮಾರ್ಗದಲ್ಲಿ ಒತ್ತುವರಿ ಮಾಡಿಕೊಂಡಿರುವುದನ್ನು ಗಮನಿಸಿ ಕೂಡಲೇ ಒತ್ತುವರಿ ತೆರವು ಮಾಡಿಸಿ ಪುನಃ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಇಂಟರ್ ಲಾಕಿಂಗ್ ಟೈಲ್ಸ್ ಗಳು ಹಾಳಾಗಿದ್ದು, ಅದನ್ನು ಕುಡಲೆ ದುರಸ್ತಿಗೊಳಿಸಲು ಸೂಚಿಸಿದರು.
ಯಲಹಂಕ ನ್ಯೂ ಟೌನ್ ಬಳಿ ರಸ್ತೆ ಬದಿ ಚರಂಡಿಗೆ ನೀರು ಹೋಗಲು ವ್ಯವಸ್ಥೆ ಮಾಡಿರುವ ಗ್ರೇಟಿಂಗ್ಸ್ ಬಳಿ ಸ್ವಚ್ಛತೆ ಮಾಡಿ ನಿರಂತವಾಗಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಿ ರಸ್ತೆಯಲ್ಲಿ ಬೀಳುವ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
3 ಕಿ.ಮೀ ನಡಿಗೆ:ಯಲಹಂಕ ನ್ಯೂ ಟೌನ್ ಸಂದೀಪ್ ಉನ್ನಿ ಕೃಷ್ಣನ್ ರಸ್ತೆ, ಜಲಮಂಡಳಿ ಕಛೇರಿಯಿಂದ ಅಟ್ಟೂರು ಬಳಿ ಇರುವ ತಿರುಮಲ ಡಾಬಾದ ಮೂಲಕ ಜಿಕೆವಿಕೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯವರೆ ಸುಮಾರು 3.00 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗವನ್ನು ನಡಿಗೆಯ ಮೂಲಕ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಈ ವೇಳೆ ಕಾರ್ಯಪಾಲಕ ಅಭಿಯಂತರರಾದ ಸುಧಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related









