ಮಂಡ್ಯ: ಮಂಗಳೂರಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಸುಖೇಶ್ ಮತ್ತು ಸಿಬ್ಬಂದಿ ವಕೀಲ ಕುಲದೀಪ್ ಶೆಟ್ಟಿ ವಿರುದ್ಧ ಅಮಾನವೀಯವಾಗಿ ನಡೆದುಕೊಂಡಿರುವುದು ಹಾಗೂ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನ್ಯಾಯಾಧೀಶರ ಕಿರುಕುಳಕ್ಕೆ ಬೇಸತ್ತು ವಕೀಲ ಅನುರಾಗ ಸಾಹು ಆತ್ಮಹತ್ಯೆ ಮಾಡಿಕೊಂಡವನ್ನು ಖಂಡಿಸಿ ಮಂಡ್ಯ ಜಿಲ್ಲಾ ವಕೀಲರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಯಾವುದೇ ಕಾರಣ ನೀಡದೆ ಡಿ.2ರಂದು ವಕೀಲ ಕುಲದೀಪ್ ಶೆಟ್ಟಿ ಅವರನ್ನು ಬಂಧಿಸಿ, ಹಲ್ಲೆ ನಡೆಸಿ ರಾತ್ರಿಯಿಡಿ ಅವರನ್ನು ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಇರಿಸಿಕೊಂಡು ಹಿಂಸೆ ನೀಡಲಾಗಿದೆ. ಇದು ವಕೀಲ ವೃಂದಕ್ಕೆ ಮಾಡಿದ ಅವಮಾನವಾಗಿದೆ ಎಂದು ಪ್ರ ತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಯಾವುದೇ ವಕೀಲನನ್ನು ಬಂಧಿಸುವ ಪೂರ್ವದಲ್ಲಿ ಪೊಲೀಸರು ನ್ಯಾಯಾಧೀಶರಿಂದ ಅನುಮತಿ ಪಡೆದು ಬಂಧಿಸಬೇಕಾಗಿರುತ್ತದೆ. ಆದರೆ, ಪಿಎಸ್ಐ ಮತ್ತು ನಾಲ್ವರು ಪೊಲೀಸರು ಯಾವುದನ್ನೂ ಲೆಕ್ಕಿಸದೆ ವಕೀಲರ ಮೇಲೆ ಹಲ್ಲೆ ಮಾಡಿದ್ದ , ಕೂಡಲೇ ಅವರನ್ನು ವಜಾ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಎಂಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ. ಮಹೇಶ್, ಉಪಾಧ್ಯಕ್ಷ ಕೆ.ಎಲ್.ಮರಿಸ್ವಾಮಿ, ಜಂಟಿ ಕಾರ್ಯದರ್ಶಿ ಎನ್.ಎಂ.ಮಹದೇವ್, ಪದಾಧಿಕಾರಿಗಳಾದ ಸೀತಾರಾಮ, ಎಂ.ರೂಪಾ, ಎಂ.ಶ್ರೀನಿವಾಸ್, ಎನ್.ರಾಮಚಂದ್ರ, ಎಚ್.ಎನ್.ಗಿರಿಜಾಂಬಿಕೆ, ಕೆ.ಪಿ.ರವಿಕುಮಾರ್, ವೈ.ಆರ್. ಅಮೃತ್, ಎಂ.ಯಶ್ವಂತ್, ಎಚ್.ಎಲ್.ವಿಶಾಲ್‌ರಘು ಸೇರಿದಂತೆ ನೂರಾರು ವಕೀಲರು ಇದ್ದರು.