ರಾಯಚೂರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ನಿರ್ವಾಹಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ ಮಹಿಳೆ ಸಂಬಂಧಿಕರಿಗೆ ಬೆದರಿಕೆಯೊಡ್ಡಲಾಗುತ್ತಿದೆ ಹಾಗೂ ಸಾರಿಗೆ ಅಧಿಕಾರಿಗಳು ನಿರ್ವಾಹಕನ ರಕ್ಷಣೆಗೆ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ನಡೆದು ಒಂದು ವರ್ಷವಾಗಿದೆ. ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಒಂದು ವರ್ಷದಿಂದ ಯಾವುದೇ ಕ್ರಮ ಜರುಗಿಸಿಲ್ಲ. ದೂರು ನೀಡಿದ ಮಹಿಳೆ ದಲಿತ ಸಮುದಾಯಕ್ಕೆ ಸೇರಿದ್ದಾರೆ. ಆರೋಪಿಯ ತನ್ನ ಜಾತಿಯ ಪ್ರಭಾವ ಹಾಗೂ ಲಂಚದ ಆಮೀಷದ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
![](https://vijayapatha.in/wp-content/uploads/2025/02/22-Aug-kkrtc-1-300x173.jpg)
ರಾಯಚೂರು ಜಿಲ್ಲೆಯ ಹೇಮನಾಳ ಗ್ರಾಮದ ನಿವಾಸಿ ದೂರುದಾರ ಮಹಳೆ ಗಾರೆ ಕೆಲಸ ಮಾಡಿಕೊಂಡಿದ್ದಾರೆ. ದೂರು ನೀಡಿ 12 ತಿಂಗಳು ಕಳೆದ ನಂತರ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಜನವರಿ 6, 2025 ರಂದು ವಿಚಾರಣೆ ನಡೆಸಲಾಗಿದೆ. ಆದರೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ ಎಂಬುವುದು ಮಹಿಳೆ ಆರೋಪವಾಗಿದೆ.
ಘಟನೆ ವಿವರ:
18-02-2024 ರಂದು ರಾತ್ರಿ KKRTC (ಬಸ್ ನಂ. ಕೆ.ಎ-36 ಎಫ್ 1532) ಬಸ್‌ನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಮಾರ್ಗದಲ್ಲಿ ನಿರ್ವಾಹಕ ಲಕ್ಷ್ಮೀಕಾಂತ್ ರೆಡ್ಡಿ (ರಾಯಚೂರು 3ನೇ ಘಟಕ) ರಾತ್ರಿ ಬಸ್ಸಿನ ಲೈಟ್ ಆಫ್ ಅಗುತ್ತಿದ್ದಂತೆ ನನ್ನ ಮೈ-ಕೈಮುಟ್ಟಿ (ಖಾಸಗಿ ಅಂಗಕ್ಕೆ ಕೈಹಾಕಿ) ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಸಂಬಂಧ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ನಾನು ನೇರವಾಗಿ ಭೇಟಿಯಾಗಿ ತಪ್ಪಿತಸ್ಥನ ವಿರುದ್ಧ ಸೂಕ್ತ ಕಾನೂನೂ ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದ್ದರೂ, ಯಾವುದೇ ರೀತಿ ಸ್ಪಂದಿಸದೆ ಬೇಜವಾಬ್ದಾರಿತನ ತೋರಿಸಿದ್ದಾರೆ. ತಪ್ಪಿತಸ್ಥನ ವಿರುದ್ಧ ಜನಪರ ಸಂಘಟನೆಗಳು ಪ್ರತಿಭಟಿಸಿದಾಗ ನಾಮ್ ಕೇ ವಾಸ್ತೆ ಎಂಬಂತೆ ಶಿಸ್ತು ಕ್ರಮ ಕೈಗೊಂಡಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.
ಕಂಡಕ್ಟರ್ ಈಗ ಮತ್ತೆ ನನ್ನ ಸಂಬಂಧಿಗಳಿಗೆ ಫೋನ್ ಮಾಡಿ ಹೆದರಿಸುವುದು, ಬೆದರಿಸುವುದು ಮಾಡುತ್ತಿದ್ದಾರೆ. ದೂರು ಅರ್ಜಿಯನ್ನು ವಾಪಸ್ ಪಡೆಯಲು ಒತ್ತಾಯಿಸಿ ಗುಂಡಾಗಿರಿ ಮಾಡುತ್ತಿದ್ದಾರೆ. ತಪ್ಪಿತಸ್ಥನಾದ ಲಕ್ಷ್ಮೀಕಾಂತರೆಡ್ಡಿಗೆ ಅಧಿಕಾರಿಗಳ ರಕ್ಷಣೆ ಇದೆ ಎಂದು ಆರೋಪಿಸಿರುವ ಮಹಿಳೆ, ಕಾನೂನಿನ ಪ್ರಕಾರ ಆತನಿಗೆ ಶಿಕ್ಷೆ ನೀಡಿ ನನಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಸಂಬಂಧ ನಮ್ಮ ಸಂಸ್ಥೆ ಮಟ್ಟದಲ್ಲಿ ವಿಚಾರಣೆ ನಡೆಯುತ್ತಿದೆ. ಯಾರೆ ತಪ್ಪು ಮಾಡಿದರು ಅವರಿಗೆ ಶಿಕ್ಷೆ ಆಗುತ್ತದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ವಿಜಯಪಥ ಮೀಡಿಯಾಗೆ ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)