
ಬೆಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಘೋರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ರಾತ್ರೋರಾತ್ರಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿ 80 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿದೆ. ಭಾರತೀಯ ಸೇನೆಯ ಕಾರ್ಯಾಚರಣೆಗೆ ಇಡೀ ದೇಶ ಹೆಮ್ಮೆಪಡುತ್ತಿದೆ. ಸೈನಿಕರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿರುವಾಗ, ಮಹಾತ್ಮ ಗಾಂಧಿಯವರ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ಕರ್ನಾಟಕ ಕಾಂಗ್ರೆಸ್ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ.
‘ಆಪರೇಷನ್ ಸಿಂಧೂರ್’ ಬೆನ್ನಲ್ಲೇ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ರಾಜ್ಯ ಕಾಂಗ್ರೆಸ್, ‘ಶಾಂತಿ ಮಾನವಕುಲದ ಅತ್ಯಂತ ಶಕ್ತಿಶಾಲಿ ಅಸ್ತ್ರ’ ಎಂಬ ಮಹಾತ್ಮ ಗಾಂಧಿಯವರ ಸಂದೇಶವನ್ನು ಹಂಚಿಕೊಂಡಿತ್ತು. ಕಾಂಗ್ರೆಸ್ ವಿರುದ್ಧ ನೆಟ್ಟಿಗರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಕೆಲವೇ ಕ್ಷಣಗಳಲ್ಲಿ, ಪೋಸ್ಟ್ ಅನ್ನು ಅಳಿಸಿದ್ದು ಸೇನೆಯನ್ನು ಹೊಗಳುವ ಮತ್ತೊಂದು ಪೋಸ್ಟ್ ಹಂಚಿಕೊಂಡಿದೆ.
ʻವಿಶ್ವದ ಬಲಿಷ್ಠ ವಾಯುಪಡೆಗಳಲ್ಲಿ ಒಂದೆಂದು ವ್ಯಾಪಕವಾಗಿ ಗುರುತಿಸಲ್ಪಟ್ಟ ಭಾರತೀಯ ವಾಯುಪಡೆ (IAF) ಹೇಡಿತನದ ಪಹಲ್ಗಾಮ್ ದಾಳಿಗೆ ತಕ್ಕ ಉತ್ತರ ನೀಡಿದೆ. ಈ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರ ಮತ್ತು ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆʼ ಎಂದು ಮತ್ತೊಂದು ಪೋಸ್ಟ್ ಅನ್ನು ಕಾಂಗ್ರೆಸ್ ಹಂಚಿಕೊಂಡಿದೆ.
80 ಕ್ಕೂ ಹೆಚ್ಚು ಭಯೋತ್ಪಾದಕರು ಫಿನಿಷ್: ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ, ಭಾರತವು `ಆಪರೇಷನ್ ಸಿಂಧೂರ್` ಹೆಸರಿನಲ್ಲಿ ವೈಮಾನಿಕ ದಾಳಿಯನ್ನು ತಡರಾತ್ರಿ ಕೇವಲ 23 ನಿಮಿಷಗಳ ಕಾಲ ನಡೆಸಿ 80 ಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರನ್ನು ಫಿನಿಷ್ ಮಾಡಿದೆ ಎಂದು ಕೆಲವು ವರದಿಗಳು ತಿಳಿಸಿವೆ.
ತಡರಾತ್ರಿ 1.44ರ ವೇಳೆಗೆ ಪಾಕ್ ಉಗ್ರರ ಅಡಗುತಾಣಗಳ ಮೇಲೆ ರಫೇಲ್ ಇನ್ನಿತರ ಫೈಟರ್‌ಜೆಟ್‌ಗಳಿಂದ ದಾಳಿ ನಡೆಸಿದ ಭಾರತೀಯ ಸೇನೆ ರಾತ್ರಿ 2.07 ವೇಳೆಗೆ ಕಾರ್ಯಾಚರಣೆ ಮುಗಿಸಿತ್ತು. ದಾಳಿ ನಡೆಸಿದ ಬಳಿಕ ಭಾರತೀಯ ಸೇನೆಯ ಜೆಟ್‌ಗಳು ಸೇಫ್ ಆಗಿ ಮರಳಿವೆ. ಇನ್ನೂ ಈ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ, ಜತೆಗೆ ಲಷ್ಕರ್ ಉಗ್ರರಿಗೆ ತರಬೇತಿ ನೀಡಿದ್ದ ಸುಬಾನಲ್ಲಾಹ್ ಮಸೀದಿ ಸೇರಿದಂತೆ ಪ್ರಮುಖ ತಾಣಗಳು ಧ್ವಂಸವಾಗಿವೆ.
ಈಗ ಪಾಕಿಸ್ತಾನದಲ್ಲಿನ 9ಕ್ಕೂ ಹೆಚ್ಚು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವಿಷಯದಲ್ಲಿ ಸೇನೆಗಳಿಗೆ ಭಾರತ್ ಸರ್ಕಾರ ಪರಮಾಧಿಕಾರ ನೀಡಿದೆ. ʻMock Drill’ಗೆ ಸೂಚನೆ ಬಂದ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಭಾರತ ಸೇನೆಗಳು ಅಧಿಕೃತವಾಗಿ ಕಾರ್ಯಾಚರಣೆಗೆ ಇಳಿದಿವೆ. ಅತ್ತ ಪಾಕಿಸ್ತಾನದ ಗಡಿಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಸೇನಾ ಚಟುವಟಿಕೆಗಳು ಬಿರುಸುಪಡೆದುಕೊಂಡಿವೆ.
ಶತ್ರು ರಾಷ್ಟ್ರದಿಂದ ದಾಳಿ ನಡೆದ ಪಕ್ಷದಲ್ಲಿ ನಾಗರಿಕರಿಗೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಸಿದ್ಧತೆ ಕೈಗೊಳ್ಳುವುದಕ್ಕಾಗಿ ಬುಧವಾರ ನಾಗರಿಕ ಸ್ವರಕ್ಷಣೆ ತಾಲೀಮು ನಡೆಸಲು ಕೇಂದ್ರ ಗೃಹಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ರಾಜ್ಯಗಳು ಸಿದ್ಧತೆಯನ್ನೂ ನಡೆಸಿದ್ದವು. ಇದರ ನಡುವೆಯೇ ಭಾರತೀಯ ಸೇನೆಯು ಮಂಗಳವಾರ ರಾತ್ರಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಇನ್ನು ಭಾರತ ಪಾಕಿಸ್ತಾನಗಳ ನಡುವೆ ಸೇನಾ ಸಮರದ ನಡೆಯಲಿದೆ ಎಂದು ಚರ್ಚೆಯಾಗಿತ್ತು. ಅದಕ್ಕೆ ಪೂರಕ ಎಂಬಂತೆ ಎರಡು ರಾಷ್ಟ್ರಗಳು ಸಮರಾಭ್ಯಾಸ ಸೇರಿದಂತೆ ಸೇನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸಿದ್ದವು.
