ಬೆಂಗಳೂರು: ಭ್ರಷ್ಟಾಚಾರ ನಡೆಸಿ ಜನರಿಂದ ಕಿತ್ತೊಗೆಯಲ್ಪಟ್ಟ ಕಾಂಗ್ರೆಸ್, 40% ಕಮಿಷನ್ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ವಿಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಕ್ಷಣದಿಂದ ಏನೇನೋ ಹೇಳಿಕೆ ನೀಡಲು ಆರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆಂಪಣ್ಣನವರು ವಯಸ್ಸಲ್ಲಿ ಹಾಗೂ ಅನುಭವದಲ್ಲಿ ಹಿರಿಯರು. ಅವರು ಬಯಸಿದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭೆ ನಡೆಸಿ ಅವರ ಸಲಹೆ, ದೂರು, ಅಹವಾಲುಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಕೊಟ್ಟ ಸಲಹೆಗಳನ್ನೂ ಜಾರಿ ಮಾಡಿದ್ದಾರೆ ಎಂದರು.
ಇನ್ನು ಟೆಂಡರ್‌ಗಳ ಪರಿಶೀಲನೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಯಾವ ಸರ್ಕಾರವೂ ಇಂತಹ ಉತ್ತಮ ಕ್ರಮವನ್ನು ಜಾರಿ ಮಾಡಿಲ್ಲ. ಹಾಗೆಯೇ ವಿವಿಧ ಇಲಾಖೆಗಳಲ್ಲಿ ಬಾಕಿ ಇದ್ದ ಬಿಲ್‌ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ಇದುವರೆಗೆ ಕೆಂಪಣ್ಣ ದೇವರಂತೆ ಇದ್ದರು. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಏನಾಯ್ತು ಎಂದು ಗೊತ್ತಿಲ್ಲ. ಅವರಿಬ್ಬರ ನಡುವೆ ಏನು ಚರ್ಚೆಯಾಗಿದೆ ಹಾಗೂ ಚರ್ಚೆ ಬಳಿಕ ಏಕೆ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ಕೆಂಪಣ್ಣ ಅವರಿಗೆ ಇನ್ನೂ ಏನಾದರೂ ಸಹಾಯ ಮಾಡಬೇಕೆಂದರೆ ಸರ್ಕಾರ ಆ ಕೆಲಸ ಮಾಡಲು ಸಿದ್ಧವಿದೆ. ಅವರಿಗೆ ಸಾಮಾಜಿಕ ಕಳಕಳಿ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಬಹುದಿತ್ತು. ಆದರೆ ಇವೆಲ್ಲ ಕಾಂಗ್ರೆಸ್ ಸ್ಪಾನ್ಸರ್ ಆಗಿದ್ದು, ಇದನ್ನೇ ಚುನಾವಣೆಯ ಅಜೆಂಡಾ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕಾಂಗ್ರೆಸ್ ಪಕ್ಷ ಕೆಂಪಣ್ಣ ಅವರನ್ನು ಬಲಿಪಶು ಮಾಡುವ ಪ್ರಯತ್ನ ಮಾಡುತ್ತಿದೆ. ಅವರ ಹಿರಿತನ, ಅನುಭವವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಕೆಂಪಣ್ಣನವರು ಇದಕ್ಕೆ ಬಲಿಯಾಗುವುದು ಬೇಡ ಎಂದು ಸಲಹೆ ನೀಡಿದರು.
ಕೆಂಪಣ್ಣ ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಬಗ್ಗೆ ಹೇಳಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುವುದಾದರೆ, ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಬೇಕೆಂದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು. ಆದರೆ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡುವುದನ್ನು ನೋಡಿದರೆ ಅವರ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತದೆ ಎಂದರು.
ಇನ್ನು ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದ್ದಕ್ಕೆ ಜನರು ಅವರನ್ನು ಇಡೀ ದೇಶದಿಂದ ಕಿತ್ತೊಗೆದಿದ್ದಾರೆ. ಈಗ ಬಿಜೆಪಿಯ ಪ್ರಾಮಾಣಿಕತೆಗೆ ತಿರುಮಂತ್ರ ಹಾಕಲು ಕಾಂಗ್ರೆಸ್ ಯತ್ನಿಸುತ್ತಿದೆ. ಇದು ಕೇವಲ ರಾಜಕೀಯ ಪ್ರೇರಿತ ಯತ್ನ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಈ ವಿಚಾರವನ್ನು ಹೆಚ್ಚು ಸುದ್ದಿ ಮಾಡುತ್ತದೆ. ಈ ಮೂಲಕ ಬಿಜೆಪಿಯ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆ ಉಂಟುಮಾಡಿ ಮತ ಕೇಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.