ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ


ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ ಮಟ್ಟದಲ್ಲಿ ಎಲ್ಲವೂ ಸರಿ ಇಲ್ಲ. ಕೈಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದನ್ನು ಇದು ಪುಷ್ಟೀಕರಿಸಿದೆ.
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್‌ನ ಶಾಸಕರೇ ಅಸಮಾಧಾನ ಹೊರ ಹಾಕುತ್ತಿದ್ದು, ಮೊನ್ನೆತಾನೆ ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ಹಂಚಿಕೆಗೆ ಹಣ ಕೊಡಬೇಕು ಎಂಬ ಆರೋಪ ಮಾಡಿದ ಬೆನ್ನಲ್ಲೆ ಕಾಂಗ್ರೆಸ್‌ನ ಕಾಗವಾಡ ಶಾಸಕ ಭರಮಗೌಡ ಕಾಗೆ (ರಾಜು ಕಾಗೆ) ಸಹ ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.
ಕಾಗವಾಡದ ಹೈನಾಪುರ ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹಾಗೂ NWKRTC ನಿಗಮದ ಅಧ್ಯಕ್ಷರೂ ಆದ ರಾಜು ಕಾಗೆ ಅವರು, ಎರಡು ವರ್ಷಗಳ ಹಿಂದೆ ತಮ್ಮ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 25 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಇದುವರೆಗೂ ಕಾರ್ಯಾದೇಶ ನೀಡಿಲ್ಲ. ಇದು ಸರ್ಕಾರದ ಆಡಳಿತ ವೈಖರಿ ಎಂದು ಹರಿಹಾಯ್ದಿದ್ದಾರೆ.
ಸರ್ಕಾರದ ಆಡಳಿತ ವೈಖರಿಯನ್ನು ನೋಡಿದರೆ ನಾನು ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದು ಅವರು, ಶಾಸಕ ಬಿ.ಆರ್. ಪಾಟೀಲ್ ಹೇಳಿರುವುದು ಸುಳ್ಳಲ್ಲ ನಿಜಾನೇ ಇದೆ. ನನ್ನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬಿ.ಆರ್. ಪಾಟೀಲ್‌ಗಿಂತ ನನ್ನ ಪರಿಸ್ಥಿತಿ ಅದರ ಅಪ್ಪನದ್ದಾಗಿದೆ. ಪಾಟೀಲ್ ಹೇಳಿದ್ದಕ್ಕೆ ನನ್ನ ಸಹಮತ ಇದೆ ಎಂದು ರಾಜು ಕಾಗೆ ಅವರು ಸರ್ಕಾರದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ.
ನಮ್ಮ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕ್ಷೇತ್ರದಲ್ಲಿ ಕೆಲಸಗಳಾಗುತ್ತಿಲ್ಲ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 25 ಕೋಟಿ ರೂ.ಗಳು ಮಂಜೂರಾಗಿತ್ತು. ಅದರಲ್ಲಿ 12 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿಗೆ, ಉಳಿದ 13 ಕೋಟಿ ರೂ.ಗಳನ್ನು 72 ಸಮುದಾಯಗಳ ಭವನ ನಿಮಾರ್ಣಕ್ಕೆ ಬಳಸಲು ಉದ್ದೇಶಿಸಿದ್ದೆ. ಆದರೆ ಇದುವರೆಗೂ ಕಾರ್ಯಾದೇಶ ನೀಡಿಲ್ಲ. ಯಾವ ಕಾರಣಕ್ಕೆ ಕಾರ್ಯಾದೇಶ ನೀಡಿಲ್ಲವೋ ನನಗೆ ಗೊತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಅನುದಾನ ಸಿಗದೆ ಅಭಿವೃದ್ಧಿ ಕಾರ್ಯಗಳಾಗದೆ ಇರುವುದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ರಾಜೀನಾಮೆ ನೀಡುವ ಮನಸ್ಶಿತಿಯಲ್ಲಿದ್ದೇನೆ. 2-3 ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತನೆ. ರಾಜೀನಾಮೆ ಕೊಟ್ಟರೂ ಅಚ್ಚರಿ ಇಲ್ಲ ಎಂದು ರಾಜೂ ಕಾಗೆ ಹೇಳಿದ್ದಾರೆ.

Related
