ದಾವಣಗೆರೆ: ನಿರಂತರವಾಗಿ ಸ್ವಂತ ಮಗಳನ್ನೇ ಹೆದರಿಸಿ ಅತ್ಯಾಚಾರವೆಸಗಿದ ತಂದೆಗೆ ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹರಿಹರ ತಾಲೂಕಿನ ದುರಗಪ್ಪ ಶಿಕ್ಷೆಗೊಳಗಾದ ಅಪರಾಧಿ. ಈತ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ. ಈ ವಿಚಾರ ಬೆಳಕಿಗೆ ಬಂದ ಬಳಿಕ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಫಟಿಎಫ್‌ಸಿ-1 (ಪೋಕ್ಸೋ ನ್ಯಾಯಾಲಯ)ದ ನ್ಯಾಯಮೂರ್ತಿ ಎನ್. ಶ್ರೀಪಾದ ಅವರಿದ್ದ ನ್ಯಾಯಪೀಠ ಅಪರಾಧಿಗೆ 20 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಹಾಗೂ 12 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ ಸಂತ್ರಸ್ತೆಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದೆ.
ಈ ಅಪರಾಧಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಗಡಿನ ಶೀಟ್ ಮನೆಯಲ್ಲಿ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ. ಬಟ್ಟೆ ಹಾಗೂ ತಿಂಡಿ ಕೊಡುತ್ತಾ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎಂಬುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ ಸಾಕ್ಷಿದಾರರ ವಿಚಾರಣೆ ಮಾಡಿದ್ದರೆ, ಕೆ.ಜಿ. ಜಯಪ್ಪ ವಾದ ಮಂಡನೆ ಮಾಡಿದ್ದರು.