CRIMENEWSದೇಶ-ವಿದೇಶ

ಭ್ರಷ್ಟಾಚಾರ ಆರೋಪ: ನ್ಯಾ. ವರ್ಮಾ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌- ಮಹಾಭಿಯೋಗ ತನಿಖೆಗೆ ಗ್ರೀನ್‌ ಸಿಗ್ನಲ್‌

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ರಚಿಸಿರುವ ತ್ರಿಸದಸ್ಯ ಸಮಿತಿಯನ್ನು ರದ್ದುಗೊಳಿಸುವಂತೆ ಕೋರಿ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿದೆ.

ಜ.16ರ ಶುಕ್ರವಾರ ವರ್ಮಾ ಅವರ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌, ಮಹಾಭಿಯೋಗ ತನಿಖೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಹೀಗಾಗಿ ಲೋಕಸಭಾ ಸ್ಪೀಕರ್ ರಚಿಸಿದ ತ್ರಿಸದಸ್ಯ ತನಿಖಾ ಸಮಿತಿಯು ಮುಂದಿನ ಕ್ರಮ ಕೈಗೊಳ್ಳಲು ಅವಕಾಶ ನೀಡಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ, ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ತೀರ್ಪು ನೀಡಿತು.

ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಲೆಕ್ಕಕ್ಕೆ ಸಿಗದ ನಗದು ಪತ್ತೆಯಾಗಿದೆ ಎಂಬ ವರದಿಗಳ ನಂತರ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾದ ನಿರ್ಣಯವನ್ನು ಅಂಗೀಕರಿಸುವ ಮತ್ತು 1968ರ ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯಡಿಯಲ್ಲಿ ತನಿಖಾ ಸಮಿತಿಯನ್ನು ರಚಿಸುವ ಲೋಕಸಭಾ ಸ್ಪೀಕರ್ ಅವರ ನಿರ್ಧಾರವನ್ನು ಪ್ರಶ್ನಿಸಿ ಅವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.‌

ಇನ್ನು ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಮೂರ್ತಿ ದತ್ತ ತೀರ್ಪಿನ ಕಾರ್ಯಾತ್ಮಕ ಭಾಗವನ್ನು ಓದುತ್ತಾ ಹೇಳಿದರು. ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968ರಡಿಯಲ್ಲಿ ಜಂಟಿ ಸಮಿತಿ ಕಡ್ಡಾಯವಾಗಿದೆ. ರಾಜ್ಯಸಭೆಯ ಉಪ ಸಭಾಪತಿಗೆ ಮೇಲ್ಮನೆಯಲ್ಲಿ ಪದಚ್ಯುತಗೊಳಿಸುವ ನಿರ್ಣಯಕ್ಕೆ ಅಂಗೀಕಾರ ನಿರಾಕರಿಸುವ ಅಧಿಕಾರವಿಲ್ಲ ಎಂಬ ಅವರ ವಾದಗಳನ್ನು ಪೀಠವು ಸ್ಪಷ್ಟವಾಗಿ ತಿರಸ್ಕರಿಸಿತು.

ಪ್ರಕರಣವೇನು?: 2025ರ ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಾಗ ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿತ್ತು. ಆಗ ತಮ್ಮ ವಿರುದ್ಧ ಆರಂಭಿಸಲಾದ ದೋಷಾರೋಪಣ ಪ್ರಕ್ರಿಯೆಯನ್ನು ನ್ಯಾಯಮೂರ್ತಿ ವರ್ಮಾ ಟೀಕಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಆಂತರಿಕ ತನಿಖಾ ಸಮಿತಿಯು ಅವರ ವಿವರಣೆಯನ್ನು ತೃಪ್ತಿಕರವಾಗಿಲ್ಲ ಎಂದು ತಿಳಿಸಿತು. ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಪೀಠ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತು.

Megha
the authorMegha

Leave a Reply

error: Content is protected !!