ಸರ್ಕಾರಿ ಕೆಲಸ ಕೊಡಿಸುವುದಾಗಿ ನೂರಾರು ಅಮಾಯಕರ ನಂಬಿಸಿ 25 ಕೋಟಿ ರೂ. ಸ್ವಾಹ: ದಂಪತಿ ಬಂಧನ, ಹಲವರಿಗೆ ಗಾಳ !

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗದ ಆಸೆ ತೋರಿಸಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ನಾಮ ಹಾಕಿದ್ದ ಕತರ್‌ನಾಕ್ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಈ ಜಾಲದಲ್ಲಿರುವ ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನು ಈ ದಂಪತಿಯ ಅಸಲಿ ಬಣ್ಣ ಬಯಲಾಗಿದ್ದು, ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕರನ್ನು ವಂಚಿಸುತ್ತಿದ್ದರು ಎಂಬುವುದು ಬಹಿರಂಗವಾಗಿದೆ. ಸದ್ಯ ಈ ಜೋಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನಿರುದ್ಯೋಗಿಗಳ ಆಸೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಜೈಸನ್ ಡಿಸೋಜಾ ಮತ್ತು ಲವೀನಾ ಎಂಬ ಈ ದಂಪತಿ ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ. ನ್ಯಾಯಾಲಯದಲ್ಲಿ ಡಿ-ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿರುವ ಆರೋಪ ಇವರ ಮೇಲಿದೆ.
ನಿರುದ್ಯೋಗಿಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದ ಅಮಾಯಕರೇ ಇವರ ಮುಖ್ಯ ಟಾರ್ಗೆಟ್ ಎನ್ನಲಾಗಿದೆ. ಇನ್ನು ಒಬ್ಬೊಬ್ಬರಿಂದ ಕೆಲಸದ ಆಧಾರದ ಮೇಲೆ 10 ರಿಂದ 25 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದ ಇವರು, 500ಕ್ಕೂ ಹೆಚ್ಚು ಜನರನ್ನು ಈ ಜಾಲಕ್ಕೆ ಸಿಲುಕಿಸಿ ಹಣ ಲಪಟಾಯಿಸಿದ್ದಾರೆ.
ಅಲ್ಲದೆ ಜನರನ್ನು ನಂಬಿಸಲು ನ್ಯಾಯಾಧೀಶರ ಸಹಿಯನ್ನೇ ನಕಲು (Forge) ಮಾಡಿ, ನಕಲಿ ನೇಮಕಾತಿ ಪತ್ರಗಳನ್ನು (Fake Appointment Orders) ಸೃಷ್ಟಿ ಮಾಡುತ್ತಿದ್ದರು ಎಂಬ ಆರೋಪವಿದೆ. ಹಣ ವಸೂಲಿ ಮಾಡಲು ಏಜೆಂಟ್ಗಳ ಗುಂಪನ್ನೇ ಕಟ್ಟಿಕೊಂಡಿದ್ದ ಇವರು, ಏಜೆಂಟ್ಗಳು ಕಮಿಷನ್ ಪಡೆದು ಉಳಿದ ಹಣವನ್ನು ಜೈಸನ್ ದಂಪತಿಗೆ ತಲುಪಿಸುತ್ತಿದ್ದರು ಎನ್ನಲಾಗಿದೆ.
ಹೋಟೆಲ್‌ನಲ್ಲಿ ದಾಖಲೆ ಪರಿಶೀಲನೆ ನಾಟಕ!: ಸಂತ್ರಸ್ತರನ್ನು ನಂಬಿಸಲು ಈ ಜೋಡಿ ಭಲೇ ನಾಟಕವಾಡುತ್ತಿತ್ತು. ಖಾಸಗಿ ಹೋಟೆಲ್‌ಗಳಲ್ಲಿ ದಾಖಲೆ ಪರಿಶೀಲನೆ ಎಂದು ಹೇಳಿ ಅಭ್ಯರ್ಥಿಗಳನ್ನು ಕರೆಸಿಕೊಂಡು ಅಲ್ಲಿದ್ದ ಇತರರಿಗೆ ಆಫರ್ ಲೆಟರ್ ಬಂದಿದೆ ಎಂದು ನಕಲಿ ಪತ್ರಗಳನ್ನು ತೋರಿಸಿ ಹಣ ಪೀಕುತ್ತಿದ್ದರು ಎಂಬ ಆರೋಪ ಇದೆ. ಕೆಲಸದ ಬಗ್ಗೆ ಕೇಳಿದರೆ ನಾಳೆ-ನಾಳಿದ್ದು ಎಂದು ಕಥೆ ಹೇಳಿ ನಂತರ ಫೋನ್ ರಿಸೀವ್ ಮಾಡದೆ ತಲೆಮರೆಸಿಕೊಳ್ತಿದ್ದರು ಎನ್ನಲಾಗಿದೆ.
ಈ ಕೃತ್ಯ ಎಸೆಗುವುದರಲ್ಲಿ ಇವರಿಗೆ ಇದು ಹೊಸದೇನಲ್ಲ. ಈ ಹಿಂದೆ ಕೂಡ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ 2024ರಲ್ಲಿ ಜೈಲು ಸೇರಿದ್ದ ಇತಿಹಾಸ ಕೂಡ ಇದೆ. ಜೈಲಿನಿಂದ ಹೊರಬಂದ ಮೇಲೆ ಬುದ್ಧಿ ಕಲಿಯದ ಈ ಜೋಡಿ ಮತ್ತೆ ಅದೇ ಚಾಳಿಯ ಹಾದಿಯನ್ನೇ ಮುಂದುವರೆಸಿದೆ.
ಸದ್ಯ ಮೋಸ ಹೋಗಿರೋದು ಗೊತ್ತಾಗಿ ಸಂತ್ರಸ್ಥರು ನೀಡಿದ ದೂರಿನ ಮೇರೆಗೆ ಬಸವೇಶ್ವರನಗರ ಠಾಣೆ ಮತ್ತು ಸಿಸಿಬಿ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು, ಇವರ ಬ್ಯಾಂಕ್ ಖಾತೆಗಳು ಮತ್ತು ಇವರಿಗೆ ಸಾಥ್ ನೀಡಿದ ಇತರ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Related









