ಕೊಳ್ಳೇಗಾಲ: ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ (Electric Shock)ದ ಪರಿಣಾಮ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಸಮೀಪ ನಡೆದಿದೆ.
ಶನಿವಾರ ಮುಂಜಾನೆ ಈ ದುರಂತ ನಡೆದಿದ್ದು, ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಅಸುನೀಗಿದ್ದಾರೆ. ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಲಾರಿಯ ಕಬ್ಬಿನ ಭಾಗಕ್ಕೆ ವಿದ್ಯುತ್ ತಂತಿ ತಗುಲಿದೆ. ಹಸಿ ಕಬ್ಬಾಗಿದ್ದರಿಂದ ಇಡೀ ಲಾರಿಗೆ ವಿದ್ಯುತ್ ಪ್ರವಹಿಸಿದೆ.
ಈ ವೇಳೆ ಚಾಲಕ ಮತ್ತು ಕ್ಲೀನರ್ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಅವರು ಲಾರಿಯಿಂದ ಹೊರಗೆ ಜಿಗಿಯುವ ಪ್ರಯತ್ನ ಮಾಡಿದ್ದರೂ ಅಷ್ಟು ಹೊತ್ತಿಗೆ ಶಾಕ್ ಹೊಡೆದಿದೆ.
ವಾಹನಗಳು ಸಾಗುವ ರಸ್ತೆಯ ಬದಿಗಳಲ್ಲಿ ಹಾಕಿರುವ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅದರಂತೆ ಲಾರಿಯಲ್ಲಿ ಎತ್ತರಕ್ಕೆ ಕಬ್ಬು ತುಂಬಿದ್ದರಿಂದ ಅದು ವಿದ್ಯುತ್ ತಂತಿ ಸ್ಪರ್ಶಿಸಿದೆ ಎಂದೂ ಹೇಳಲಾಗುತ್ತಿದೆ.
ಅವಘಡಲ್ಲಿ ಮೃತಪಟ್ಟ ಚಾಲಕ ಮತ್ತು ಕ್ಲೀನರ್‌ಗಳ ಬಗ್ಗೆ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಇನ್ನು ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.