ಬೆಂಗಳೂರು: ಕಮರ್ಷಿಯಲ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಿಲಿಂಡರ್ ಪಕ್ಕದಲ್ಲೇ ಮಲಗಿದ್ದ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಾಯವಾಗಿರುವ ಘಟನೆ ಡೈರಿ ಸರ್ಕಲ್ ಸಮೀಪದ ಮಹಾಲಿಂಗೇಶ್ ಬಡಾವಣೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗುರುವಾರ ಆ.24ರ ಬೆಳಗ್ಗೆ 9 ಗಂಟೆ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ರವಿ (45) ಎಂಬಾತ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಹಾಲಿಂಗೇಶ್ ಬಡಾವಣೆಯ ಕಟ್ಟದ ಮೊದಲ ಮಹಡಿಯಲ್ಲಿರುವ ಪೋಲಮ್ಮಸ್ ಮೆಸ್ ಹೋಟೆಲ್ನಲ್ಲಿದ್ದ ಕಮರ್ಷಿಯಲ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ.
ಗುರುವಾರ ಬೆಳಗ್ಗೆ ಎಂದಿನಂತೆ ಅಡುಗೆ ಭಟ್ಟರು ಟಿಫನ್ಗೆ ತಯಾರಿ ಮಾಡುತ್ತಿದ್ದರು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಮೊದಲ ಮಹಡಿಯಲ್ಲಿ ಅಡುಗೆ ಮಾಡುತ್ತಿದ್ದ ನಾಗರಾಜ್ ಹಾಗೂ ರೋಮಯ್ಯ ಚೋರ್ಲಾ ಗಂಭೀರ ಗಾಯಗೊಂಡಿದ್ದಾರೆ. ಮೂಲತಃ ಇವರು ಅಸ್ಸಾಂ ಮೂಲದವರು ಎಂದು ತಿಳಿದು ಬಂದಿದೆ.
ಇತ್ತ ಸಿಲಿಂಡರ್ ಜಾಗದಲ್ಲಿ ಮಲಗಿದ್ದ ರವಿ ಮೃತಪಟ್ಟಿದ್ದಾರೆ. ಮೆಸ್ ನಡೆಸುತ್ತಿದ್ದ ಕಾರಣಕ್ಕೆ ಕಟ್ಟಡದ ಕೆಳ ಮಹಡಿಯಲ್ಲಿ ಸಿಲಿಂಡರ್ಗಳನ್ನು ಇಡಲಾಗಿತ್ತು. ಒಳ ಭಾಗದಲ್ಲಿ ಒಟ್ಟು 10 ಕಮರ್ಷಿಯಲ್ ಸಿಲಿಂಡರ್ಗಳನ್ನು ಇಡಲಾಗಿತ್ತು. ಸ್ಫೋಟಗೊಂಡ ಸಿಲಿಂಡರ್ ಪಕ್ಕದಲ್ಲೆ 10 ಸಿಲಿಂಡರ್ಗಳು ಇದ್ದವು. ಒಂದು ವೇಳೆ ಆ ಸಿಲಿಂಡರ್ಗಳು ಸ್ಫೋಟಗೊಂಡಿದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಅದೃಷ್ಟವಶಾತ್ ಉಳಿದ ಸಿಲಿಂಡರ್ಗಳಿಗೆ ಯಾವುದೇ ಹಾನಿಯಾಗಿಲ್ಲ.
ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ: ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ. ರವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಲಿಂಡರ್ ಸ್ಫೋಟ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತ ಜನರು ಕಟ್ಟಡದ ಮುಂದೆ ಜಮಾಯಿಸಿದ್ದರು.