ದಾವಣಗೆರೆ: ಸಿನಿಮಾ ಶೈಲಿಯಲ್ಲಿ ವಿದ್ಯಾರ್ಥಿನಿಯನ್ನು ಅಪಹಣರ ಮಾಡಲು ಯತ್ನಿಸಿ ವಿಫಲವಾಗಿರೋ ಘಟನೆ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ತೋಳ ಹುಣಸೆ ಗ್ರಾಮದ ಬಳಿ ಇರುವ ವಿಶ್ವವಿದ್ಯಾಲಯದ ಮುಂದೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ಇಬ್ಬರು ಯುವಕರು ಸೇರಿದಂತೆ ನಾಲ್ಕೈದು ಜನ ಕಾರಿಗೆ ಬಲವಂತವಾಗಿ ಎಳೆದುಕೊಂಡು ಹೋಗಿ ಕೂರಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು.
ಬಲವಂತವಾಗಿ ಎಳೆದುಕೊಂಡು ಹೋಗುವಾಗ ವಿದ್ಯಾರ್ಥಿನಿ ರಕ್ಷಣೆಗಾಗಿ ಚೀರಿಕೊಂಡಿದ್ದಾಳೆ. ತಕ್ಷಣವೇ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗ ಕಾರನ್ನು ಅಡ್ಡಗಟ್ಟಿ ರಕ್ಷಿಸಲು ಮುಂದಾಗಿದ್ದಾರೆ. ಕೊನೆಗೆ ದಾವಣಗೆರೆ ಗ್ರಾಮಾಂತರ ಠಾಣಾ ಪೊಲೀಸರು ಯುವತಿಯ ಹೇಳಿಕೆ ಪಡೆದು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ.
ಬಳ್ಳಾರಿ ಮೂಲದ ಈ ವಿದ್ಯಾರ್ಥಿನಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ವ್ಯಾಸಂಗ ಮಾಡಿತ್ತಿದ್ದಾಳೆ. ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಗ್ಯಾಂಗ್‌ನಲ್ಲಿ ಅವಳ ತಂದೆ-ತಾಯಿ ಕೂಡ ಇದ್ದರು. ಕೌಟುಂಬಿಕ ಸಮಸ್ಯೆ ಮತ್ತು ಸಂಘರ್ಷವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನು ವಿದ್ಯಾರ್ಥಿನಿ ಚೀರಾಡಿದ ವಿಡಿಯೋದಲ್ಲಿ ಬಾಲ್ಯ ವಿವಾಹ ಮಾಡಿರುವ ಕುರಿತು ಹೇಳಿಕೆ ನೀಡಿದ್ದಾಳೆ. ನನ್ನನು ಕರೆದುಕೊಂಡು ಹೋಗಿ ಆತನ ಬಳಿ ಬಿಡುತ್ತಾರೆ. ಅವನ ಜೊತೆ ನನಗೆ ಬದುಕಲು ಇಷ್ಟವಿಲ್ಲ. ಅವನ ಜೊತೆ ಕಳಿಸೋ ವಿಚಾರಕ್ಕೆ ನಾನು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಹೇಳಿದ್ದಾಳೆ.
ಇದಲ್ಲದೇ ಆತನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ಅಳಲು ತೋಡಿಕೊಂಡಿದ್ದಾಳೆ ವಿದ್ಯಾರ್ಥಿನಿ. ಇದೇ ಸಂದರ್ಭದಲ್ಲಿ ತಾಯಿ-ಮಗಳು ಪರಸ್ಪರ ಆಪಾದನೆ ಮಾಡಿಕೊಂಡಿದ್ದಾರೆ. ಅಪಹರಣದ ವೇಳೆ ಸ್ಥಳೀಯರು ಎಂಟ್ರಿ ಕೊಟ್ಟಿದ್ದರಿಂದ ಸದ್ಯ ವಿದ್ಯಾರ್ಥಿನಿ ಬಚಾವ್ ಆದಂತೆ ಕಾಣುತ್ತಿದೆ. ಬಳಿಕ ಏನು ನಡೆಯುವುದೋ ಅದನ್ನು ಅವರ ಕುಟುಂಬದವರೇ ಹೇಳಬೇಕು.