Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ಸಾವುಗೇಡಿ ಸರಕಾರ : ಎಚ್‌ಡಿಕೆ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ಸಾವುಗೇಡಿ ಸರಕಾರದ ಆಡಳಿತದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತಾಗಿ ಸರಣಿ ಟ್ವೀಟ್‌ ಮಾಡಿರುವ ಅವರು, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ನೀಡಿರುವ ಉತ್ತರಕ್ಕೆ ತಿರುಗೇಟು ನೀಡಿದ್ದಾರೆ. ಡಾ. ಸುಧಾಕರ್‌ ಅವರೇ; ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ?

ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ; ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಥ ಧಾರುಣ ಸಾವುಗಳಾದ ಮೇಲೆಯಾದರೂ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನು? ಜಿಲ್ಲಾಸ್ಪತ್ರೆಯಲ್ಲೇ ಇಂಥ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ? ಎಂದು ಪ್ರಶ್ನಿಸಿದ್ರು.

ಆಸ್ಪತ್ರೆಯಿಂದ ನಿರ್ದಯವಾಗಿ ಹೊರಹಾಕಲ್ಪಟ್ಟ ಆ ತಾಯಿ, ನಾಲ್ಕು ಗೋಡೆಗಳ ನಡುವೆ ಇಡೀ ರಾತ್ರಿಯೆಲ್ಲಾ ನರಳಿ ಜೀವ ಚೆಲ್ಲಿದ್ದಾರೆ. ಜನಿಸಿದ ಕ್ಷಣದಲ್ಲೇ ಉಸಿರುಬಿಟ್ಟ ಆ ಎರಡು ಕಂದಮ್ಮಗಳ ಮರಣ ನಿಮ್ಮ ಅಂತಃಕರಣವನ್ನು ಕಲಕಿಲ್ಲವೇ ಸಚಿವರೇ? ಕರ್ನಾಟಕ ಕಂಡ ಅತ್ಯಂತ ಕರಾಳ ಕ್ರೌರ್ಯವಿದು. ಅದನ್ನು ನಾನು ಪ್ರಶ್ನಿಸಿದ್ದೇ ತಪ್ಪಾ?ಎಂದು ಕೇಳಿದ್ದಾರೆ.

ನನ್ನ ಸರಕಾರವಿದ್ದಾಗ ಚಾಮರಾಜನಗರದ ಸುಳವಾಡಿಯ ದೇಗುಲದಲ್ಲಿ ನಡೆದ ವಿಷಪ್ರಸಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವೇನು? ಆ ಘಟನೆ ನಡೆದಾಗ ನಾನು ಚೆನ್ನೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದೆ. ವಿಷಯ ಗೊತ್ತಾದ ಕೂಡಲೇ ಹಿಂದಿರುಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಇದಕ್ಕೂ ಸಂಬಂಧವೇನು? ಅಲ್ಲಿ ನಡೆದಿದ್ದು ಷಡ್ಯಂತ್ರ, ಇಲ್ಲಿ ನಡೆದದ್ದು ಕ್ರೌರ್ಯ ಎಂದು ಹೇಳಿದ್ದಾರೆ.

ಅದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ದುರಂತದಿಂದ 36 ಜನರ ಸಾವಿಗೆ ಕಾರಣರಾಗಿದ್ದು ಯಾರು? ನಿಮ್ಮ ವೈಫಲ್ಯವಲ್ಲವೇ? ರಾಜ್ಯದ ಉದ್ದಗಲಕ್ಕೂ ನಡೆದ ಸಾವುಗಳ ರಣಕೇಕೆ ನಿಮ್ಮ ಕಿವಿಗೆ ಇಂಪಾಗಿತ್ತಾ? ಕೋವಿಡ್‌ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೇ ಚೆನ್ನಾಗಿ ಗೊತ್ತು ಎಂದು ಕಿಡಿಕಾರಿದ್ರು.

ಕಾಸಿಗಾಗಿ ಹುದ್ದೆ; ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿ ಸಚಿವರೇ! ಎಂದು ಎಚ್ಚರಿಕೆ ನೀಡಿದ್ದಾರೆ.

ಪರ್ಸಂಟೇಜ್‌ ವ್ಯವಹಾರದ ಬಗ್ಗೆ ಮಾತನಾಡಿದ ಗುತ್ತಿಗೆದಾರರಾದ ಕೆಂಪಣ್ಣ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮ ಒಂದಕ್ಕೆ ಬರಬೇಕಿತ್ತು. ಅವರನ್ನು ಬರದಂತೆ ತಡೆಯಲು ಏನೆಲ್ಲಾ ಹೈಡ್ರಾಮಾ ನಡೆಸಿದ್ರಿ, ಯಾರ ಕಾಲು ಹಿಡಿದಿರಿ ಎನ್ನುವ ಮಾಹಿತಿ ನನಗೂ ಇದೆ. ‘ಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲʼ.

ಸಚಿವರೇ, ತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮಮುಖ್ಯಮಂತ್ರಿ ಅವರಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ನಿಮ್ಮ ಪಕ್ಷಕ್ಕೂ ಅಂಥ ನೈತಿಕತೆ ಬಿಜೆಪಿ ಸರಕಾರಕ್ಕೆ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
4 ವರ್ಷಕ್ಕೊಮ್ಮೆ ಚೌಕಾಸಿ ನಡೆಸುವ ಬದಲು 7ನೇ ವೇತನ ಆಯೋಗ ಜಾರಿಮಾಡಿ: ನೌಕರರ ಸೇನೆ ಆಗ್ರಹ ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ 2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್ KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌