ಮಾ.28 ರವರೆಗೆ ಇಡಿ ಕಸ್ಟಡಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್: ಕೋರ್ಟ್ ಆದೇಶ
ನ್ಯೂಡೆಲ್ಲಿ: ಮದ್ಯ ನೀತಿ ಪ್ರಕರಣದಲ್ಲಿ ನಿನ್ನೆ ಗುರುವಾರ ರಾತ್ರಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು 7 ದಿನಗಳ ಕಾಲ ಅಂದರೆ ಮಾರ್ಚ್ 28ರವರೆಗೆ ಇಡಿ ವಶಕ್ಕೆ ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯ ಒಪ್ಪಿಸಿದೆ.
10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ (ED) ಕೋರಿತ್ತು. ಅರವಿಂದ್ ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ 9 ಸಮನ್ಸ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಇಡಿ ಹೇಳಿದ್ದು ಅವರ ಹೇಳಿಕೆಯನ್ನು ದಾಖಲಿಸಿದಾಗ ಅವರು ಸತ್ಯವನ್ನು ಬಹಿರಂಗಪಡಿಸಲಿಲ್ಲ ಅಥವಾ ಸಮಾಂಜಸವಾದ ಹೇಳಿಕೆ ನೀಡಲಿಲ್ಲ ಎಂದು ವಾದಿಸಿತ್ತು.
2022 ರಲ್ಲಿ ಎಎಪಿಯ ಗೋವಾ ಚುನಾವಣಾ ಪ್ರಚಾರದ ವೇಳೆ ಈ ಅಕ್ರಮ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಕೆಲವು ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಈ ಮದ್ಯ ನೀತಿ ರೂಪಿಸುವ ಸಂಚಿನಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದಾರೆ, ಕಿಕ್‌ಬ್ಯಾಕ್‌ಗೆ ಒತ್ತಾಯಿಸುತ್ತಿದ್ದಾರೆ ಎಂದು ಇಡಿ ಕೋರ್ಟ್‌ನಲ್ಲಿ ಹೇಳಿದೆ.
ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ಕೋರ್ಟ್ ಒಪ್ಪಿಸಿ ಆದೇಶಿಸಿರುವ ಬಗ್ಗೆ ಎಎಪಿ ನಾಯಕಿ ಮತ್ತು ದೆಹಲಿ ಸಚಿವ ಅತಿಶಿ ಮಾತನಾಡಿ, ಬಿಜೆಪಿ ಇಡಿ ಮರೆಯಲ್ಲಿ ನಿಂತು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ. ಇಲ್ಲಿಯವರೆಗೆ, ಎಎಪಿ ನಾಯಕರ ವಿರುದ್ಧ ಇಡಿ ಯಾವುದೇ ಅಕ್ರಮ ಹಣ ಪತ್ತೆ ಮಾಡಿಲ್ಲ. ಆದರೂ ಈ ರೀತಿ ಅಕ್ರಮವಾಗಿ ಬಂಧಿಸಿದೆ. ಇದು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ. ಪ್ರಜಾಪ್ರಭುತ್ವದ ಕೊಲೆ. ಇದನ್ನು ದೇಶದ ಜನತೆ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ನಾಲ್ಕು ದಿನಗಳ ಪ್ರತಿಭಟನೆ ಎಎಪಿ ಘೋಷಣೆ: ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಆಪ್ ಇಂಡಿಯಾ ಬ್ಲಾಕ್ ನಾಯಕರೊಂದಿಗೆ ಪಕ್ಷದ ಕಾರ್ಯಕರ್ತರು ನಾಳೆ (ಮಾ.23) ಬೆಳಗ್ಗೆ 10 ಗಂಟೆಗೆ ದೆಹಲಿಯ ಶಹೀದಿ ಪಾರ್ಕ್‌ನಲ್ಲಿ ಐಟಿಒದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ದೆಹಲಿ ಸಚಿವ ಮತ್ತು ಹಿರಿಯ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರಾಯ್ ಹೇಳಿದ್ದಾರೆ.
ನಾಳೆ ಭಗತ್ ಸಿಂಗ್, ರಾಜಗುರು ಅವರ ಶಹೀದಿ ದಿವಸ್. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಈ ದಿನವನ್ನು ಗುರುತಿಸಿ, ಮಾರ್ಚ್ 23 ರಂದು, ನಾವು ಶಹೀದಿ ಪಾರ್ಕ್, ಐಟಿಒ ಹೊರಗೆ ಪ್ರತಿಭಟನೆ ನಡೆಸುತ್ತೇವೆ ಎಂದು ರಾಯ್ ಹೇಳಿದರು.
ಇನ್ನು ನಾಳೆಯ ಪ್ರತಿಭಟನೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಭಾಗವಹಿಸಲಿದ್ದಾರೆ. ಮಾರ್ಚ್ 24 ರಂದು ನಗರದಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಲಾಗುವುದು ಎಂದು ರಾಯ್ ಹೇಳಿದರು.
ಮಾರ್ಚ್ 25 ರಂದು ಪಕ್ಷದ ಮುಖಂಡರು ಹೋಳಿ ಆಚರಿಸುವುದಿಲ್ಲ. ಮನೆ ಮನೆಗೆ ತೆರಳಿ ಬಿಜೆಪಿ ಕಾರ್ಯ ಚಟುವಟಿಕೆಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ. ಮಾರ್ಚ್ 26ರಂದು ‘ಪ್ರಧಾನಿ ಮನೆ’ ಎದುರು ಪ್ರತಿಭಟನೆ ನಡೆಸಲಾಗುವುದು. ಅಖಿಲ ಭಾರತ ಮಟ್ಟದಲ್ಲಿ ‘ಮೆಗಾ ಪ್ರತಿಭಟನೆ’ನಡೆಯಲಿದೆ ಎಂದು ರಾಯ್ ಹೇಳಿದ್ದಾರೆ.