ಬೆಂಗಳೂರು: ರಾಜ್ಯದ ರೈತರಿಗೆ ಗಿಳಿಪಾಠ ಹೇಳುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮಿಳುನಾಡು ರಾಜ್ಯದಲ್ಲಿ ಮೂರು ಬೆಳೆ ಬೆಳೆಯುವುದಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಕರ್ನಾಟಕ ಜಲಸಂರಕ್ಷಣ ಸಮಿತಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಕನ್ನಡ ಸಂಘಟನೆಗಳು 5ನೇ ದಿನವಾದ ಇಂದು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸುವ ಮೂಲಕ ಸಾಥ್ ನೀಡಿದವು.
ಈ ವೇಳೆ ಮಾತನಾಡಿದ ಅವರು, ನೀರಾವರಿ ಮಂತ್ರಿಯಾಗಿ ಇಂಡಿಯಾ ಒಕ್ಕೂಟ ಬಲಪಡಿಸುವ ಚಿಂತಿಯಲ್ಲಿದ್ದಾರೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಓಲೈಸುವ ಕಾರಣದಿಂದಲೇ ರಾಜ್ಯದ ನೀರು ಬಿಟ್ಟು ರೈತರನ್ನು ಬಲಿಕೊಟ್ಟಿದ್ದಾರೆ. ಅವರ ಸ್ನೇಹ ಬೇಕು ಅದಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಷ್ಟ್ರಪತಿಗಳು, ಕೇಂದ್ರ ಜಲ ಸಂಪನ್ಮೂಲ ಸಚಿವರು ಹಾಗೂ ಕಾವೇರಿ ಪ್ರಾಧಿಕಾರದ ಮುಖ್ಯಸ್ಥರನ್ನು ಕರ್ನಾಟಕ ಜಲ ಸಂರಕ್ಷಣ ಸಮಿತಿ ನಿಯೋಗ ಇದೇ ಅ.9ರಂದು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದೆ. ಭೇಟಿಗಾಗಿ ಸಮಯ ನಿಗದಿಗೊಳಿಸುವಂತೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಅಧ್ಯಕ್ಷರು, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವಿ.ವೆಂಕಟಸ್ವಾಮಿ ಮಾತನಾಡಿ, ರಾಜ್ಯದ ಜನರನ್ನು ಮರೆತು ನೀರು ಹರಿಸುವ ಮೂಲಕ ತಮಿಳುನಾಡಿನ ಓಲೈಕೆ ನೀತಿಯನ್ನು ರಾಜ್ಯ ಸರ್ಕಾರ ಮಾಡಬಾರದು ಎಂದರು.
ಇಂದು ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಧರಣಿ ಆರಂಭಿಸಿ ಉಳಿಸಿ ಉಳಿಸಿ ಕಾವೇರಿ ಉಳಿಸಿ, ಕಾವೇರಿ ನಮ್ಮದು ಘೋಷಣೆ ಕೂಗಿದರು. ಧರಣಿಯಲ್ಲಿ ಕನ್ನಡ ಚಳವಳಿಯ ದಲಿತ ಸಂಘಟನೆಗಳ ಮುಖಂಡ ವೆಂಕಟೇಶ, ಸತೀಸ್, ಕನ್ನಡ ಚಳವಳಿ ಗುರುದೇವ ನಾರಾಯಣ್, ಅಮ್ ಆದ್ಮಿಪಕ್ಷದ ಉಷಾ ಮೋಹನ್ ಮತ್ತಿತರರು ಭಾಗವಹಿಸಿದ್ದರು.