ಬೆಂಗಳೂರು: ಬೆಂಗಳೂರು ಮಹಾಸಾರಿಗೆ ಸಂಸ್ಥೆಯ ನೌಕರರು ಸಂಸ್ಥೆಯ ನಿಯಮಾವಳಿಯನ್ನು ಉಲ್ಲಂಘಿಸಿ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದದನ್ನು ಬಿಡದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಇಂದು (A.30) ಎಚ್ಚರಿಕೆ ನೀಡುವ ಸುತ್ತೋಲೆ ಹೊರಡಿಸಿದ್ದು, ಸಂಸ್ಥೆಯ ಹಲವಾರು ನೌಕರರು ತಮ್ಮ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಇನ್ನು ಬೆಂಮಸಾಸಂಸ್ಥೆಯು ಅಗತ್ಯತಾ ಸೇವಾ ಕಾಯ್ದೆ ಅಡಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ನಗರ ಹಾಗೂ ಹೊರವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಸಕಾಲದಲ್ಲಿ ಒದಗಿಸುವುದು ಸಂಸ್ಥೆಯ ಧೈಯೋದ್ದೇಶವಾಗಿದೆ. ಹೀಗಾಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ನೌಕರರು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಿಯಾಗದಂತೆ ಕರ್ತವ್ಯ ನಿರ್ವಹಿಸುವುದು ಅವರ ಜವಾಬ್ದಾರಿಯಾಗಿದೆ.
ಸಂಸ್ಥೆಯ ಯಾರೇ ನೌಕರನು ಸಂಸ್ಥೆಯ ಪೂರ್ವಾನುಮತಿ ಪಡೆಯದೆ ಯಾವುದೇ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಂಡಿದ್ದಲ್ಲಿ ಅಥವಾ ಇತರ ಯಾವುದೇ ಉದ್ಯೋಗ ಮಾಡುತ್ತಿದ್ದಲ್ಲಿ ನೌಕರರ ಶಿಸ್ತು ಮತ್ತು ನಡತೆಗಳ ನಿಯಮಾವಳಿಗಳು 1971 ರ ನಿಯಮ 4(1) ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಸ್ಥೆಯ ನೌಕರರು ಪೂರ್ವಾನುಮತಿ ಇಲ್ಲದೆ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವುದು ನೌಕರರ ಶಿಸ್ತು ಮತ್ತು ನಡತೆಗಳ ನಿಯಮಾವಳಿಗಳು 1971 ರ ನಿಯಮ 4(1) ರ ವಿರುದ್ಧವಾಗಿದೆ.
ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರರು ಸಂಸ್ಥೆಯ ನಿಯಮಾವಳಿಗಳನ್ವಯ ಕರ್ತವ್ಯ ನಿರ್ವಹಿಸುವುದು ಅವರ ಆದ್ಯ ಕರ್ತವ್ಯವಾಗಿದೆ. ಸಂಸ್ಥೆಯ ನಿಯಮಾವಳಿಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ಆದ್ದರಿಂದ ಸಂಸ್ಥೆಯ ಯಾವುದೇ ನೌಕರರು ಸಂಸ್ಥೆಯ ಪೂರ್ವಾನುಮತಿ ಪಡೆಯದೆ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಲ್ಲಿ ಅಂತಹ ನೌಕರರ ವಿರುದ್ಧ ನೌಕರರ ಶಿಸ್ತು ಮತ್ತು ನಡತೆಗಳ ನಿಯಮಾನಗಳು 1971 ರನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯ ಸುತ್ತೋಲೆ ಹೊರಡಿಸಿದ್ದಾರೆ.