ಪಾವಗಡ: ನಿಧನಹೊಂದಿದ ದಲಿತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಸವರ್ಣಿಯರು ಅಡ್ಡಿಪಡಿಸಿ, ತಡೆದ ಘಟನೆ ತಾಲೂಕಿನ ಕ್ಯಾತಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಅಂತ್ಯಸಂಸ್ಕಾರಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ದಲಿತರು ಬೇರೆ ದಾರಿ ಕಾಣದೇ ರಸ್ತೆಯಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಗ್ರಾಮದ 65 ವರ್ಷದ ಈರಣ್ಣ ಎಂಬವರು ನಿಧನರಾಗಿದ್ದರು. ಹೀಗಾಗಿ ಪಾವಗಡ ತಾಲೂಕು ನಿಡಗಲ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕ್ಯಾತಗಾನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ಈರಣ್ಣ ಅವರ ಅಂತ್ಯಕ್ರಿಯೆ ನಡೆಸಲು ದಲಿತ ಸಮುದಾಯದವರು ಮುಂದಾದರು.
ಆದರೆ, ಈ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲು ಕೆಲವು ಸವರ್ಣಿಯರು ಅಡ್ಡಿಪಡಿಸಿದ್ದು, ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದವರು ರಸ್ತೆಯಲ್ಲೇ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿದ ಊರಿನ ದಲಿತ ಸಮುದಾಯದವರು ಹಾಗೂ ದಲಿತ ಸಂಘಟನೆಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದು, ಬಳಿಕ ತಾಲೂಕು ದಂಡಾಧಿಕಾರಿ ವರದರಾಜ್ ಅವರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವರದರಾಜು ಮಾತನಾಡಿ, ಈ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ ಆದಷ್ಟು ಬೇಗನೆ ತೆರವುಗೊಳಿಸುತ್ತೇವೆ ಮತ್ತು ದಲಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರುದ್ರ ಭೂಮಿಯನ್ನು (ಸ್ಮಶಾನದ) ವ್ಯವಸ್ಥೆ ಮಾಡಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಪಿಎಸ್ ಜಿಲ್ಲಾ ಸಂಯೋಜಕರಾದ ಕೆಂಚ ರಾಯಪ್ಪ ಮಾತನಾಡಿ, ಇಡೀ ಪಾವಗಡ ತಾಲೂಕಿನಲ್ಲಿ ದಲಿತರಿಗೆ ಬದುಕುವುದಕ್ಕೆ ಭೂಮಿ ಇಲ್ಲ, ಸತ್ತರೂ ಅಂತ್ಯಕ್ರಿಯೆ ಮಾಡಲು ಭೂಮಿ ಇಲ್ಲ. ಸರ್ಕಾರಿ ಜಮೀನು ಯಾರು ಒತ್ತುವರಿ ಮಾಡಿದ್ದಾರೆ, ಅಂತವರಿಗೆ ನೋಟಿಸ್ ಕೊಟ್ಟು ತಾತ್ಕಾಲಿಕವಾಗಿ ಪರಿಹಾರ ಮಾಡಿಕೊಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ನಾರಾಯಣಪ್ಪ, ಡಾ.ಸುಬ್ಬರಾಯಪ್ಪ ಲಿಂಗದಹಳ್ಳಿ, ನಿವೃತ್ತಿ ಎಎಸ್‌ಐ ದುರ್ಗೇಶಪ್ಪ, ಲೋಕೇಶ್, ಸಿ.ಕೆ. ತಿಪ್ಪೇಸ್ವಾಮಿ, ಹನುಮಂತರಾಯಪ್ಪ ಹರಿಹರಪುರ, ಕೆಂಚಪ್ಪ, ರಮೇಶ ಟಿ.ಎನ್.ಪೇಟೆ, ತಿಮ್ಮರಾಜು, ತಿಪ್ಪೇಸ್ವಾಮಿ ಹಾಗೂ ಗ್ರಾಮಸ್ಥರು ಇದ್ದರು.