ಬೆಳಗಾವಿ: ನನ್ನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಡಿ ಹಗರಣದ ಷಡ್ಯಂತ್ರ ಮಾಡಿದ್ದ. ಬೆಳಗಾವಿ ನಾಯಕರೊಬ್ಬರಿಗೆ ಫೋನ್ ಮಾಡಿ ಕೃತ್ಯ ಎಸಗಿದ್ದ. ಅವರು ಇನ್ನೂ ನೂರಾರು ಸಿಡಿ ಮಾಡಿದ್ದಾರೆ, ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಡಿಕೆ ಶಿವಕುಮಾರ್ ಒಳ್ಳೆಯ ಸ್ನೇಹಿತರಾಗಿದ್ದೇವು. ಅವರ ಹೆಂಡತಿ ನನಗೆ ಪಕ್ಷ ಬಿಡದಂತೆ ಹೇಳಿದ್ದರು. ನೀವಿಬ್ಬರು ಒಟ್ಟಿಗೆ ಇರಬೇಕು ಎಂದಿದ್ದರು, ಸಿಡಿ ಹಗರಣವಾದ್ದರಿಂದ ಅವನು ಹೆದರಿಬಿಟ್ಟಿದ್ದ. ಆದರೆ ನಾನು ಎದರಲಿಲ್ಲ ಎಂದರು.
ಇದೇ ಮಾದರಿಯ ಸಿಡಿಗಳು ಇನ್ನೂ ಇದ್ದು ಇದರಲ್ಲಿ ಹಿರಿಯ ರಾಜಕಾರಣಿಗಳು ಇದ್ದಾರೆ, ಐಎಎಸ್ ಅಧಿಕಾರಿಗಳು ಇದ್ದಾರೆ, ಈ ಗ್ಯಾಂಗ್‌ಅನ್ನು ಸದೆ ಬಡಿಯಬೇಕಾದರೆ ತನಿಖೆಯಾಗಲೇಬೇಕು. ನನ್ನ ಹಾಗೂ ಡಿಕೆಶಿ ವಿರುದ್ಧ ಸಂಬಂಧ ಹಾಳಾಗಲು ಗ್ರಾಮೀಣ ಶಾಸಕಿಯೊಬ್ಬರು ಕಾರಣ, ಕಿತ್ತೂರು ಚೆನ್ನಮ್ಮ ವಿರುದ್ಧ ಅವಹೇಳನ ಪದ ಬಳಕೆಗೆ ಅವರೇ ಕಾರಣ, ಇಲ್ಲಿ ಜಾತಿ ಸಂಘರ್ಷ ಉಂಟಾದರೆ ನಾನು ಕಾರಣ ಅಲ್ಲ. ಇದಕ್ಕೆ ಗ್ರಾಮೀಣ ಶಾಸಕಿಯೇ ಕಾರಣ ಎಂದು ಲಕ್ಷ್ಮೀ ಹಬ್ಬಾಳ್‌ಕರ್ ಹೆಸರು ಹೇಳದೆ ಆರೋಪಿಸಿದರು.
ಬೆಳಗಾವಿಯ ಸಕ್ಕರೆ ಕಾರ್ಖಾನೆಯಲ್ಲಿ ಅಕ್ರಮವಾಗಿದೆ. ನನ್ನಿಂದ ಏನಾದರೂ ಅಕ್ರಮ ಆಗಿದ್ದರೆ ನನ್ನ ತಲೆ ಕಡಿದು ಟೇಬಲ್ ಮೇಲೆ ಇಡುತ್ತೇನೆ ಎಂದ ಅವರು, ಅವರು ಮಾರ್ಚ್ 12ರಂದು ಸಿಡಿ ಬಿಡುಗಡೆ ಮಾಡಿದ್ದರು. ಸಿಡಿ ಹಗರಣದಲ್ಲಿ ಬಹಳಷ್ಟು ಷಡ್ಯಂತ್ರ ನಡೆದಿದೆ. ನನ್ನ ಬಳಿ 128 ಸಾಕ್ಷ್ಯಗಳಿವೆ, ಹೀಗಾಗಿ ಶಿವಕುಮಾರ್‌ನನ್ನು ಸಿಬಿಐ ಬಂಧಿಸಬೇಕು ಎಂದು ಆಗ್ರಹಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಬಳಸದೆ ಆರೋಪ ಮಾಡಿದ ರಮೇಶ್ ಜಾರಕಿಹೊಳಿ. ಚುನಾವಣೆ ಸಂದರ್ಭದಲ್ಲಿ ಸಿಡಿ ಬಿಡುಗಡೆ ಮಾಡಿ ತೇಜೋವಧೆ ಮಾಡುವ ಪಿತೂರಿ ನಡೆಯುತ್ತಿದೆ. ನನ್ನ ಹಾಗೂ ಡಿಕೆಶಿ ವಿರುದ್ಧ ಸಂಬಂಧ ಹಳಸಲು ಈ ಶಾಸಕಿ ಕಾರಣ ಎಂದು ಹೇಳಿದರು.
ಸಿಡಿ ಹಗರಣದಲ್ಲಿ ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರಿದ್ದಾರೆ. ನನ್ನ ಬಳಿ 20ಕ್ಕೂ ಹೆಚ್ಚು ಆಡಿಯೋ ದಾಖಲೆಗಳಿವೆ. ನನ್ನ ಮೊಬೈಲ್‌ನಲ್ಲಿ ಹಲವಾರು ನಾಯಕರ ಅಕ್ರಮಗಳ ಬಗ್ಗೆ ದಾಖಲೆಗಳಿವೆ. ಒಂದು ಆಡಿಯೋದಲ್ಲಿ ಡಿ.ಕೆ. ಶಿವಕುಮಾರ್ ನನ್ನ ಬಳಿ ದುಬೈ ಲಂಡನ್‌ನಲ್ಲಿ ಮನೆಗಳಿವೆ. ಸಾವಿರಾರು ಕೋಟಿ ಹಣವಿದೆ ಎಂದು ಹೇಳಿದ್ದಾರೆ. ಆ ಆಡಿಯೋ ಕೂಡ ನನ್ನ ಬಳಿ ಇದೆ ಎಂದು ಹೇಳಿದರು.
ಆಡಿಯೋದಲ್ಲಿ ನನ್ನ ವಿರುದ್ಧ ಸಂಚು ಮಾಡಿರುವ ಆಡಿಯೋ ಮಾಹಿತಿ ಇದೆ. ನಾನು ಡಿಕೆಶಿ ಮತ್ತು ಅವರ ಕಂಪನಿಯನ್ನು ಬಂಧಿಸುವರೆಗೂ ವಿರಮಿಸುವುದಿಲ್ಲ. ಬೆಂಗಳೂರಿನ ಶಾಂತಿ ನಗರ ಹೌಸಿಂಗ್ ಕೋ ಆಪರೇಟಿವ್ ಸೋಸೈಟಿಯಲ್ಲಿ ₹10,000 ಕೋಟಿ ಅಕ್ರಮ ಆಗಿದೆ. ಡಿಕೆಶಿ, ಸಿಡಿ ಹಗರಣದ ಆ ಹುಡುಗಿ, ನರೇಶ್, ಶ್ರವಣ್, ಮಂಡಿ ಮೊಹಲ್ಲಾದ ಮತ್ತಿಬ್ಬರ ವಿರುದ್ಧ ತನಿಖೆಯಾಗಬೇಕು ಎಂದರು.