KSRTC ಬಸ್ಗೆ ಜಾಗ ಬಿಡು ಎಂದು ಹಾರ್ನ್ ಮಾಡಿದ್ದಕ್ಕೆ ಚಾಲಕನ ಮೇಲೆ ಹಲ್ಲೆ: ಆರೋಪಿ ವಿರುದ್ಧ FIR ದಾಖಲು- ಬಂಧನ


ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಡ್ಯೂಟಿ ಮೇಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಚಾಲಕ ಕಂ ನಿರ್ವಾಹಕರೊಬ್ಬರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿ ವಿರುದ್ಧ ಇಂದು ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಗುರುವಾರ ಜುಲೈ 3ರ ಬೆಳಗ್ಗೆ 8 ಗಂಟೆಯಲ್ಲಿ ನಗರದ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಬಸ್ ನಿಲ್ದಾಣದ ಬಳಿಕ ಕನಕಪುರ ಘಟಕದ ಚಾಲಕ ಕಂ ನಿರ್ವಾಹಕ ಆರ್.ಶಿವರಾಜು ಎಂಬುವರ ಮೇಲೆ ಪಾದಚಾರಿ ಹುಸೇನ್ ಪಾಷ ಎಂಬಾತನೆ ಹಲ್ಲೆ ಮಾಡಿದ ಆರೋಪಿ.
ಆರೋಪಿ ಹುಸೇನ್ ಪಾಷ ಏಕಾಏಕಿ ಚಾಲಕ ಕಂ ನಿರ್ವಾಹಕ ಆರ್.ಶಿವರಾಜು ಹಣೆಗೆ ಕೈಗೆ ಹಾಕಿದ್ದ ಲೋಹದ ಬಳೆಯಿಂದ ಹೊಡೆದಿದ್ದರಿಂದ ಕಣ್ಣಿನ ಸ್ವಲ್ಪ ಮೇಲೆ ರಕ್ತಗಾಯವಾಗಿದೆ. ಒಂದು ವೇಳೆ ಕಣ್ಣಿಗೆ ಆ ಹೊಡೆತ ಬಿದ್ದಿದ್ದರೆ ಕಣ್ಣೆ ಹೋಗುವ ಸಂಭವವಿತ್ತು. ಸದ್ಯ ಚಾಲಕರನ್ನು ಜಯನಗರದ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಿ ಗಾಯಕ್ಕೆ 4-5 ಹೊಲಗೆ ಹಾಕಿಸಿ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಪೊಲೀಸ್ ಠಾಣೆಗೆ ಸಂಸ್ಥೆಯ ಅಧಿಕಾರಿಗಳು ಕರೆದುಕೊಂಡು ಬಂದು ದೂರು ನೀಡಿದ್ದಾರೆ.
ಘಟನೆ ವಿವರ: ಕೆಎಸ್ಆರ್ಟಿಸಿ ನಿಗಮದ ಕನಕಪುರ ಘಟಕದಲ್ಲಿ ಚಾಲಕ ಕಂ-ನಿರ್ವಾಹಕ ಆರ್. ಶಿವರಾಜ್ ಕರ್ತವ್ಯ ನಿರ್ವಹಿಸುತ್ತಿದ್ದು, ಇಂದು ಬೆಳಗ್ಗೆ ಸುಮಾರು 8ರ ಸಮಯದಲ್ಲಿ ಬಸ್ ಬೆಂಗಳೂರಿನಿಂದ ಕನಕಪುರಕ್ಕೆ ಹೋಗುತ್ತಿರುವಾಗ, ಬನಶಂಕರಿ ಬಸ್ ನಿಲ್ಯಾಣದಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದಾಗ ಬಸ್ ಮುಂಭಾಗದಲ್ಲಿ ಇಬ್ಬರು ಪಾದಚಾರಿಗಳು ಏರ್ ಫೋನ್ ಹಾಕಿಕೊಂಡು ನಿಂತಿದ್ದರು.
ಈ ವೇಳೆ ಚಾಲಕ ಶಿವರಾಜು ಹಾರ್ನ್ ಮಾಡಿ ಅಲ್ಲಿಂದ ಹೋಗುವಂತೆ ತಿಳಿಸಿದ್ದಾರೆ. ಅಷ್ಟಕ್ಕೆ ಕುಪಿಗೊಂಡ ಆರೋಪಿ ಹುಸೇನ್ ಪಾಷ ಅವಾಚ್ಯ ಶಬ್ದಗಳಿಂದ ಬೈದು, ಬಸ್ ಮುಂದಕ್ಕೆ ಹೋಗಲು ಬಿಡದೆ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಏಕಾಏಕಿ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ಆ ಸಮಯದಲಿ ಆತನ ಸ್ನೇಹಿತ ದುರ್ಗಪ್ರಸಾದ್ ಎಂಬಾತ ಬಂದು ಗಲಾಟೆ ಬಿಡಿಸಿದ್ದಾನೆ. ಇನ್ನು ಇತ್ತ ಹಲ್ಲೆಗೆ ಒಳಗಾದ ವಿಷಯ ತಿಳಿದ ಕೂಡಲೇ ಸಂಸ್ಥೆಯ ಟಿಐ ರವಿಕುಮಾರ್ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಟಿಸಿ ರಮೇಶ್ ಅವರು ಸ್ಥಳಕ್ಕೆ ಬಂದು ಚಾಲಕ ಶಿವರಾಜು ಅವರನ್ನು ಜಯನಗರದ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆ ಪಡೆದ ಬಳಿಕ ಪೊಲೀಸ್ ಠಾಣೆಗೆ ಸಂಸ್ಥೆಯ ಈ ಅಧಿಕಾರಿಗಳ ಜತೆ ಬಂದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೈಯಿಂದ ಹೊಡೆದು ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿರುವ ಹುಸೇನ್ ಪಾಷ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಚಾಲಕ ಶಿವರಾಜು ದೂರು ನೀಡಿದ್ದಾರೆ. ಚಾಲಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Related
