NEWSನಮ್ಮಜಿಲ್ಲೆ

KSRTC: ಮಳವಳ್ಳಿ- ತಿ.ನರಸೀಪುರ ಮಾರ್ಗ ಬಸ್‌ ಸೌಲಭ್ಯ ಹೆಚ್ಚಿಸಿ- ಮಂಡ್ಯ ಸಾರಿಗೆ ಡಿಸಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಜಿಲ್ಲೆಯ ಮಳವಳ್ಳಿ-ತಿ.ನರಸೀಪುರ ಮಾರ್ಗ ಮಧ್ಯದ ಮುಡುಕನಪುರ ಹಾಗೂ ಅಕ್ಕ ಪಕ್ಕದ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ ಕಾರಣ ಹೆಚ್ಚು ಬಸ್‌ಗಳ ಸೌಕರ್ಯ ಕಲ್ಪಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ಈ ಸಂಬಂಧ ಇಂದು (ಜುಲೈ 3-2025) ಸಾರಿಗೆ ನಿಗಮದ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಪಿ.ನಾಗರಾಜು ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ಮುಖಂಡರು ಮೈಸೂರು ಜಿಜಿಲ್ಲೆ ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿ ಮುಡುಕನಪುರ ಮಾರ್ಗವಾಗಿ ಮಂಡ್ಯ – ಮೈಸೂರು ಎರಡು ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಮಳವಳ್ಳಿಯಿಂದ ತಿ.ನರಸೀಪುರಕ್ಕೆ ಹೋಗಿ ಬರುವ ಮಾರ್ಗ ಮಧ್ಯದ ಹಳ್ಳಿಗಳಿಗೆ ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ಮಾರ್ಗದ ಹಳ್ಳಿಗಳಾದ ಹುಚ್ಚನದೊಡ್ಡಿ ಗೇಟ್, ರಾಗಿ ಬೊಮ್ಮನಹಳ್ಳಿ, ಹಂಗರಾಪುರ, ವಡಕೆಪುರ ಶನೇಶ್ವರ ದೇವಸ್ಥಾನ, ನಲ್ಲಿಗೆರೆ, ರಾಮೇಗೌಡನಪುರ ಹಣಕೊಳ ಗೇಟ್, ಕೆಂಪನಪುರ, ಎಸ್.ದೊಡ್ಡಪುರ, ಚಿದರವಳ್ಳಿ, ಮುಡುಕನಪುರ,ಹಲವಾರ ದೊಡ್ಡಬಾಗಿಲು ಗೇಟ್, ದೊಡ್ಡಬಾಗಿಲು, ಕೃಷ್ಣಾಪುರ, ಕಾರ್ಗಳ್ಳಿ,ಕೈಯಂಬಳ್ಳಿ,
ಕೆಬ್ಬೇಹುಂಡಿ, ಮೆಗಡಹಳ್ಳಿ, ಮುಸುವಿನಕೊಪ್ಪಲು, ಬೆನಕನಹಳ್ಳಿ, ತಿ.ನರಸೀಪುರ ಈ ಮಾರ್ಗದಲ್ಲಿ ಹೋಗಿ ಬರುವ ಅಕ್ಕ ಪಕ್ಕದ ಹಳ್ಳಿಗಳ ಜನಸಾಮಾನ್ಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ರೋಗಿಗಳು, ವೃದ್ಧರು, ಗರ್ಭಿಣಿಯರಿಗೆ ಆಸ್ಪತ್ರೆಗಳಿಗೆ ಹೋಗಿ ಬರಲು ಅನುಕೂಲವಾಗಲಿದೆ ಎಂದು ವಿವರಿಸಿದರು.

ಇನ್ನು ರೈತರು, ಕೂಲಿ ಕಾರ್ಮಿಕರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿ ದಿನ ಸರ್ಕಾರಿ ಕಚೇರಿಗಳು ಹಾಗೂ ನ್ಯಾಯಾಲಯಗಳಿಗೆ ಸಮಯಕ್ಕೆ ಸರಿಯಾಗಿ ಹೋಗಿ ಬರಲು ಸರಿಯಾಗಿ ಬಸ್ಸುಗಳ ವ್ಯವಸ್ಥೆ ಇಲ್ಲದ ಕಾರಣ ಪರದಾಡುವಂತಾಗಿದೆ, ಆದ್ದರಿಂದ ತಾವು ತುರ್ತಾಗಿ ಕ್ರಮ ಕೈಗೊಂಡು ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಿ ಸಮಯಕ್ಕೆ ಸರಿಯಾಗಿ ಹೋಗಿ ಬರಲು ಅನುಕೂಲ ಮಾಡಿ ಕೊಡಬೇಕೆಂದು ಮನವಿ ಮಾಡಿದರು.

ಈ ವೇಳೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗನೂರು ಶಂಕರ್, ತಿ.ನರಸೀಪುರ ತಾಲೂಕು ಮಹಿಳಾ ಅಧ್ಯಕ್ಷೆ ರೂಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಪಿ.ಪರಶಿವಮೂರ್ತಿ, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಕುರುಬೂರು ಶಿವಪ್ರಸಾದ್ ಇದ್ದರು.

Megha
the authorMegha

Leave a Reply

error: Content is protected !!