
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದ ಕಡೂರು ಘಟಕದ ಎಟಿಎಸ್ ಕಿರುಕುಳದಿಂದ ಮನನೊಂದ ಚಾಲನಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಸೆಣಸಾಡುತ್ತಿರುವ ಘಟನೆ ಇಂದು ಘಟಕದಲ್ಲಿ ನಡೆದಿದೆ.
ಕಡೂರು ಘಟಕದ ಚಾಲಕ ಮಧು ಎಂಬುವರೆ ಈ ಅಧಿಕಾರಿಯ ಕಿರುಕುಳದಿಂದ ಮನನೊಂದು (ಏ.18) ಇಂದು ಡಿಪೋದಲ್ಲೇ ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಕಡೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಇನ್ನು ಘಟಕದಲ್ಲಿ ಎಟಿಸ್ ಪುಟ್ಟಸ್ವಾಮಿ ಎಂಬಾತ ತಮಗಿಷ್ಟ ಬಂದಂತೆ ರಜೆ ಕೊಡುವುದು ಹಾಗೂ ನೌಕರರು ಡ್ಯೂಟಿ ಮಾಡಿದರೂ ಗೈರು ಹಾಜರಿ ಮಾಡುವ ಮೂಲಕ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ಮಧು ವಾರದ ರಜೆಯಲ್ಲಿ ಡ್ಯೂಟಿ ಮಾಡಿದ್ದಾರೆ. ಈ ನಡುವೆ ತಮ್ಮ 7 ವರ್ಷದ ಪುತ್ರನಿಗೆ ಅನಾರೋಗ್ಯವಾಗಿದ್ದ ಕಾರಣ ಆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು.
ಆದರೆ, ಇಂಥ ಕಠಿಣ ಪರಿಸ್ಥಿತಿಯ ನಡುವೆಯೂ ವಾರದ ರಜೆ ದಿನದಲ್ಲೂ ಡ್ಯೂಟಿ ಮಾಡಿ ಬಳಿಕ ಮಗುವಿನ ಆರೋಗ್ಯ ಸಮಸ್ಯೆ ಹೆಚ್ಚಾದ್ದರಿಂದ ವಾರದ ರಜೆಯಲ್ಲಿ ಮಾಡಿರುವುದಕ್ಕೆ ಒಂದು C-Off ಕೊಡಿ ಎಂದು ಕೇಳಿದ್ದಾರೆ. ಆದರೆ ಸಿ ಆಫ್ ಕೊಡದೆ ಗೈರು ಹಾಜರಿ ತೋರಿಸುವ ಮೂಲಕ ಕಿರುಕುಳ ನೀಡಿದ್ದಾನೆ ಈ ಎಟಿಎಸ್ ಪುಟ್ಟಸ್ವಾಮಿ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ ಇದೇ ರೀತಿ ಇತರ ನೌಕರರಿಗೂ ಕಿರುಕುಳ ನೀಡುತ್ತಿದ್ದಾನೆ ಈ ಎಟಿಎಸ್. ತಿಂಗಳಲ್ಲಿ 22ದಿನ ಡ್ಯೂಟಿ ಮಾಡಿದರೆ ಎಲ್ಲ ರಜೆ ಪಡೆಯುವುದಕ್ಕೂ ನೌಕರರು ಅರ್ಹರಿರುತ್ತಾರೆ ಎಂದು ಸಂಸ್ಥೆಯಲ್ಲಿಯೇ ಒಂದು ಅವೈಜ್ಞಾನಿಕ ನಿಯಮವನ್ನು ಮಾಡಿಕೊಂಡಿದ್ದಾರೆ. ಅದರಂತೆ 22 ದಿನಗಳ ಡ್ಯೂಟಿ ಮಾಡಿದರೂ ನೌಕರರಿಗೆ ರಜೆ ಸೌಲಭ್ಯ ಕೊಡದೆ ಭಾರಿ ಕಿರುಕುಳ ನೀಡುತ್ತಿದ್ದಾರೆ.
ಇನ್ನು ಡ್ಯೂಟಿ ಮಾಡಿದರೂ ನಾವು ವಾರದ ರಜೆಯನ್ನು ಪಡೆಯದ ಸ್ಥಿತಿ ಘಟಕದಲ್ಲಿ ನಿರ್ಮಾಣವಾಗಿದೆ. ಈ ಎಟಿಎಸ್ ಪುಟ್ಟಸ್ವಾಮಿ ಕಳೆದ 8-9 ವರ್ಷಗಳಿಂದಲೂ ಇದೇ ಡಿಪೋದಲ್ಲಿ ಇದ್ದು ಲಂಚಕೊಟ್ಟವರಿಗೆ ಮಾತ್ರ ರಜೆ ಮಂಜೂರು ಮಾಡುತ್ತಾರೆ, ಲಂಚ ಕೊಡದಿದ್ದರೆ ಗೈರು ಹಾಜರಿ ತೋರಿಸುತ್ತಾರೆ ಎಂದು ಘಟಕದ ನೌಕರರು ಕಿಡಿಕಾರಿದ್ದಾರೆ.
ಇಂಥ ಭ್ರಷ್ಟರು ಘಟಕದಲ್ಲಿ ಇರುವುದರಿಂದ ಇಲ್ಲಿ ಇರುವ ಇತರ ಅಧಿಕಾರಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಇಲ್ಲಿ ಒಳ್ಳೆ ಅಧಿಕಾರಿಗಳು ಇದ್ದರೂ ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಇನ್ನು ಘಟಕ ವ್ಯವಸ್ಥಾಪಕರು ಹೊಸದಾಗಿ ಬಂದಿದ್ದು ಅವರಿಗೆ ಈತನ ಬಗ್ಗೆ ಇನ್ನೂ ಏನು ಗೊತ್ತಿಲ್ಲ ಎಂದು ನೌಕರರು ತಿಳಿಸಿದ್ದಾರೆ.
ಇನ್ನಾದರೂ ಇಂಥ ಲಂಚಕೋರ ಎಟಿಎಸ್ಅನ್ನು ಕೂಡಲೇ ವರ್ಗಾವಣೆ ಮಾಡಿ ಜತೆಗೆ ಈತ ಪಡೆದಿರುವ ಲಂಚದ ಬಗ್ಗೆ ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಈತನ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.