ಬೆಂಗಳೂರು: ರಾಜ್ಯದ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸುವ ಮೂಲಕ ಬರ ಘೋಷಣೆ ಮಾಡುವುದಕ್ಕೆ ಶಿಫಾರಸು ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇಂದು ನಡೆದ ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಇವತ್ತು ಸಂಜೆಯೊಳಗೆ ಅಧಿಕೃತವಾಗಿ ಬರ ಪೀಡಿತ ತಾಲೂಕುಗಳ ಘೋಷಣೆಗೆ ಸಹಿ ಹಾಕಲಿದ್ದಾರೆ. ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ ಘೋಷಣೆಗೆ ಅಧಿಸೂಚನೆ ಹೊರಡಿಸುತ್ತೇವೆ. ಆ ನಂತರ 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
ಮೊದಲು ಬರ ಘೋಷಣೆ ಮಾಡಬೇಕು, ಬಳಿಕ ಪರಿಹಾರ ಘೋಷಣೆ ಮಾಡಲಾಗುವುದು. ಮೊದಲು 113 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಬೆಳೆ ಸಮೀಕ್ಷೆಗೆ ಆದೇಶ ನೀಡಿದ್ದೇವು. 62 ತಾಲೂಕುಗಳಲ್ಲಿ ಬರಕ್ಕೆ ಅರ್ಹ ವಿವರ ಬಂದಿತ್ತು.
ಸಚಿವ ಸಂಪುಟದಲ್ಲೂ ವಿಸ್ತೃತ ಚರ್ಚೆಯಾಗಿತ್ತು. ಆಗ 62 ತಾಲೂಕುಗಳು ಮಾತ್ರವಲ್ಲ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ಬರ ಸ್ಥಿತಿ ಇದೆ ಎಂದು ಚರ್ಚೆಯಾಗಿತ್ತು. ಹೀಗಾಗಿ ಉಳಿದ 134 ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ಆದೇಶಿಸಿದ್ದೇವು ಎಂದು ವಿವರಿಸಿದರು.
ಈಗ ಎಲ್ಲ ಜಿಲ್ಲೆಗಳಿಂದ ಬೆಳೆ ಸಮೀಕ್ಷೆ ವರದಿ ಬಂದಿದೆ. 161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. 34 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ. ಒಟ್ಟು 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಉಳಿದ 40 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದರೂ ಕೂಡ ತೇವಾಂಶ ಕೊರತೆ ಕಂಡು ಬರುತ್ತಿಲ್ಲ. ತನ್ನ ಮಾರ್ಗಸೂಚಿಗಳ ಪ್ರಕಾರ, ಮಧ್ಯಮ ಬರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಡಬಹುದು ಅಥವಾ ಇಲ್ಲದೇ ಇರಬಹುದು ಎಂದು ಹೇಳಿದರು.
ಇನ್ನು ಮಲೆನಾಡು ಭಾಗದಲ್ಲಿ ಶೇ.40ಕ್ಕಿಂತ ಹೆಚ್ಚು ಕೊರತೆ ಇದೆ. ಇದರಿಂದಾಗಿ ಕಾವೇರಿ ಜಲಾಯನ ಪ್ರದೇಶದಲ್ಲೂ ನೀರಿನ ಕೊರತೆ ಆಗಿದೆ. ದಕ್ಷಿಣ ಒಳನಾಡಿನಲ್ಲೂ ಸಾಕಷ್ಟು ಮಳೆ ಕೊರತೆ ಇದೆ. ಬರ ಘೋಷಣೆ ಶಿಫಾರಸು ಪಟ್ಟಿ ಇದೇ ಅಂತಿಮ ಅಲ್ಲ. ಬಾಕಿ ಉಳಿದ 40 ತಾಲೂಕುಗಳಲ್ಲಿ ಕೂಡ 15 ದಿನಗಳ ಬಳಿಕ ಬೆಳೆ ಸಮೀಕ್ಷೆ ಮಾಡುತ್ತೇವೆ. ಅವು ಕೂಡ ಮಾರ್ಗಸೂಚಿಗಳಿಗೆ ಒಳಪಟ್ಟರೆ ಅವುಗಳನ್ನು ಮತ್ತೆ ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಸದ್ಯ ಬರ ಘೋಷಣೆ ಮನವಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಎಲ್ಲ ಬರ ಪೀಡಿತ ತಾಲೂಕುಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲು ಸೂಚನೆ ನೀಡಿದ್ದೇವೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚಿನ ಉದ್ಯೋಗ ನೀಡಬೇಕು ಅಂತ ಸೂಚನೆ ನೀಡಿದ್ದೇವೆ ಎಂದರು.