NEWSನಮ್ಮಜಿಲ್ಲೆನಮ್ಮರಾಜ್ಯ

ಪ್ರಧಾನಿ ಹಠದಿಂದಾಗಿ, ಬಿಜೆಪಿಯೇತರ ರಾಜ್ಯಗಳ ಹತ್ತಿಕ್ಕುವ ಪ್ರಯತ್ನ: ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯನಗರ: ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪಾಲನ್ನು ಕೇಳುತ್ತಿಲ್ಲ. ಬರ ಪರಿಹಾರಕ್ಕೆ ಒತ್ತಾಯ ಮಾಡುತ್ತಿಲ್ಲ. ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಹಣ ನೀಡಲಾಗುತ್ತಿದೆ. ಬಿಜೆಪಿಯೇತರ ರಾಜ್ಯಗಳನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆ. ಮೋದಿಯವರ ಹಠದಿಂದಾಗಿ ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ದೆಹಲಿಯಲ್ಲಿಯೂ ಅಧಿಕಾರ ಹತ್ತಿಕ್ಕಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಆಡಳಿತ ಹದಗೆಟ್ಟಿದೆ. ಬೆಳಗಾವಿಯಲ್ಲಿ ಸದನ ಆರಂಭವಾಗಿ ಮೂರು ದಿನ ಕಳೆದರೂ ಹಿಂದುಳಿದ ಭಾಗಗಳ ಕುರಿತು ಚರ್ಚೆಯಾಗಿಲ್ಲ. ಶೇ 40 ರಷ್ಟು ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು, ಎಎಪಿಯ ಯೋಜನೆಗಳ್ನು ಕದ್ದು ಕಾಂಗ್ರೆಸ್ ಅಧಿಕಾರಕ್ಕೇರಿದೆ. ಅವರ ಗ್ಯಾರಂಟಿ ಯೋಜನೆಗಳು ಯಾರಿಗೂ ತಲುಪುತ್ತಿಲ್ಲ. ಏಳು ತಿಂಗಳೂ ಕಳೆದರೂ ಖಾತರಿಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಬರದಿಂದಾಗಿ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರೂ, ಸರ್ಕಾರ ಆದ್ಯತೆಯ ಮೇರೆಗೆ ಪರಿಹಾರ ಕಂಡುಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ತೀವ್ರ ಸಂಕಷ್ಟ ಎದುರಾಗಿದ್ದು, ರಾಜ್ಯ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷವೇ ಇಲ್ಲ. ಸದನದಲ್ಲಿ ಬರ ಪರಿಸ್ಥಿತಿಯನ್ನು ಚರ್ಚೆಗೆ ತೆಗೆದುಕೊಳ್ಳಲು ಬಿಜೆಪಿ ನಾಯಕರೇ ಅವಕಾಶ ನೀಡಿಲ್ಲ. ಭ್ರಷ್ಟರಹಿತ ಸರ್ಕಾರ ನೀಡುತ್ತೇವೆ ಎಂದು ಮೋದಿ ಹೇಳುತ್ತಾರೆ. ಆದರೆ, ಅದೇ ಭ್ರಷ್ಟಾಚಾರದಿಂದಲೇ ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದರು. ಮಾಡಾಳ್ ವಿರೂಪಾಕ್ಷಪ್ಪ ಸಿಕ್ಕಿಬಿದ್ದರು. ಕುಟುಂಬ ರಾಜಕಾರಣದಿಂದ ದೇಶ ಅಭಿವೃದ್ಧಿಯಾಗಲ್ಲ ಎಂದು ಮೋದಿ ಹೇಳುತ್ತಾರೆ ಆದರೆ, ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಲಾಗಿದೆ ಎಂದು ದೂರಿದರು.

ಕಾಂಗ್ರೆಸ್ ಕೂಡ ಇದರಿಂದ ಹೊರತಾಗಿಲ್ಲ. ಒಂದೇ ಕುಟುಂಬದ ಎರಡ್ಮೂರು ಮಂದಿ ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ಮಗ, ಡಿಕೆ ಶಿವಕುಮಾರ್ ಮತ್ತು ಅವರ ತಮ್ಮ, ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆ ಹೀಗೆ ಕುಟುಂಬ ರಾಜಕಾರಣವೇ ಕಣ್ಮುಂದೆ ಇದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ರೈತರ ವಿಚಾರದಲ್ಲಿ ಗಮನಹರಿಸಬೇಕು. ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರಿಗೆ ಕರೆಂಟ್ ಕೊಡುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಜನರ ಮುಂದಿಡಲೆಂದೇ ಹಳ್ಳಿ ಹಳ್ಳಿಗಳಿಗೆ ತೆರಳುತ್ತಿದ್ದೇವೆ. ಕಳೆದ 70 ವರ್ಷಗಳಿಂದ ಆಳಿದ ಪಕ್ಷಗಳಿಗೆ ಪರ್ಯಾಯವಾಗಿರುವುದು ಎಎಪಿ. ಇದನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ ಎಂದರು.

ಸಮಸ್ಯೆಗಳನ್ನು ಜನರ ಮುಂದಿಡಲು ಅರಳಿಕಟ್ಟೆ: ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಮೂರು ವರ್ಷ ಪ್ರತಿಭಟನೆ ನಡೆಸಿದರು. ಈ ಎಲ್ಲಾ ಸಮಸ್ಯೆಗಳನ್ನು ಜನರ ಮುಂದಿಟ್ಟು, ನಮಗೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಜಾತಿ ರಾಜಕಾರಣ, ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ ಎಎಪಿಗೆ ಅವಕಾಶ ನೀಡಿ ಎಂದು ಜನರನ್ನು ಕೇಳುತ್ತೇವೆ. ಉತ್ತಮವಾದ ಆಸ್ಪತ್ರೆಗಳು, ಉತ್ತಮ ಶಿಕ್ಷಣವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. 100ರಲ್ಲಿ ಶೇ 75ರಷ್ಟು ಗೆದ್ದಿರುವ ಶಾಸಕರ ಆಸ್ತಿ 100 ಕೋಟಿ ರೂ.ಗೂ ಅಧಿಕವಾಗಿದೆ. ಇದೆಲ್ಲವೂ ಹೇಗೆ ಬಂತು. ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವನ್ನು ಹುಡುಕಿ. ಪ್ರತಿ ಜಿಲ್ಲೆಯಲ್ಲೂ, ತಾಲೂಕಿನ ಹಳ್ಳಿಗಳಲ್ಲಿ ಅರಳಿಕಟ್ಟೆ; ಬನ್ನಿ ಮಾತನಾಡೋಣ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಹಳ್ಳಿಗಳಲ್ಲಿ ಶಿಕ್ಷಣದ ಗುಣಮಟ್ಟ ಸರಿಯಾಗಿದೆಯಾ? ಆರೋಗ್ಯದ ವ್ಯವಸ್ಥೆ, ರೈತರ ಶ್ರಮಕ್ಕೆ ಬೆಲೆ, ಯುವಕರಿಗೆ ಅವಕಾಶ, ಮಹಿಳೆಯರಿಗೆ ಸಮಾನ ಹಕ್ಕು, ಭ್ರಷ್ಟಾಚಾರ ನಿರ್ಮೂಲನೆ, ಕುಟುಂಬ ರಾಜಕಾರಣ ನಿರ್ಮೂಲನೆಯ ವಿಚಾರಗಳನ್ನಿಟ್ಟುಕೊಂಡು ನಾವು ಹಳ್ಳಿ ಹಳ್ಳಿಗೆ ತೆರಳುತ್ತಿದ್ದೇವೆ. ಜಾತಿ ರಾಜಕಾರಣ ನಡೆಯುತ್ತಿದೆ. ಬಿಜೆಪಿ ನಾಯಕ ಗೂಳಿಹಟ್ಟಿ ಶೇಖರ್ ಅವರಿಗೆ ಆಗಿರುವುದು ತಪ್ಪು. ಈ ಘಟನೆಯು ಸರಿಯಲ್ಲ. ಅವರ ಜಾತಿಯನ್ನು ಕೇಳಿ ಆಹ್ವಾನ ವಿಲ್ಲ ಎಂದು ಹೇಳಿದ್ದರೆ ತಪ್ಪು. ಇಂತಹ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸುವುದೇ ನಮ್ಮ ಕೆಲಸ ಎಂದು ಹೇಳಿದರು.

ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ. ಸಂಸತ್ತಿನ ಚುನಾವಣೆಗೆ ರಾಷ್ಟ್ರ ಮಟ್ಟದ ನಾಯಕರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಮುಂದಿನ ಏಳರಿಂದ ಎಂಟು ತಿಂಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇವೆ. ಕಳೆದ ವಿಧಾನಸಭೆಯಲ್ಲಿ ಹೆಚ್ಚಿನ ಜನರನ್ನು ಪಕ್ಷದಿಂದ ನಿಲ್ಲಿಸಲಾಗಿತ್ತು. ಉಚಿತ ಯೋಜನೆಗಳಿಂದ ದೇಶ ಅಭಿವೃದ್ಧಿಯಾಗಲ್ಲ ಎಂದು ಪ್ರಧಾನಿ ಹೇಳಿದರು. ಆದರೆ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯೇ ಉಚಿತಗಳನ್ನು ಘೋಷಿಸಿದೆ. ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಿರುವುದು ಬಿಜೆಪಿಯ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಅದು ಸರಿಯಲ್ಲ ಎಂದರು.

ಜಾತಿಗಣತಿ ವೈಜ್ಞಾನಿಕವಾಗಿರಲಿ: 1930ರಲ್ಲಿ ಜಾತಿ ಗಣತಿ ನಡೆದಿತ್ತು. ಇದಾದ ನಂತರ ಭಾರತದಲ್ಲಿ ಈವರೆಗೂ ಜಾತಿ ಗಣತಿಯಾಗಿಲ್ಲ. 10 ವರ್ಷಗಳಿಗೊಮ್ಮೆ ಜನಗಣತಿಯಾಗುತ್ತಿದೆ. ಜಾತಿಗಣತಿಯಿಂದ ಸರಿಯಾಗಿ ಎಲ್ಲಾ ಜನಾಂಗಕ್ಕೂ ಮೀಸಲಾತಿ ನೀಡಲು ಸಾಧ್ಯ. ಪ್ರಬಲವಾಗಿರುವವರೇ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಬಹುತೇಕ ರಾಜಕಾರಣಿಗು ಕೆಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಳಿದ ಹಲವು ಜಾತಿಗಳಲ್ಲಿ ಓರ್ವ ತಾಲೂಕು ಪಂಚಾಯಿತಿ ಸದಸ್ಯ ಕೂಡ ಆಗಿಲ್ಲ.

ಹೀಗಾಗಿ, ವೈಜ್ಞಾನಿಕವಾಗಿ ಜಾತಿಗಣತಿ ನಡೆಸಿ. ಸಿದ್ದರಾಮಯ್ಯ ಅವರು 2013ರಲ್ಲಿ ಜಾತಿಗಣತಿ ವರದಿಯನ್ನು ಸ್ವೀಕರಿಸಲಿಲ್ಲ. ಆನಂತರ ಬಂದ ಯಾವುದೇ ಮುಖ್ಯಮಂತ್ರಿಗಳು ವರದಿಯನ್ನು ಸ್ವೀಕರಿಸಲಿಲ್ಲ. ಜಾತಿಗಣತಿ ಸ್ವೀಕಾರಕ್ಕೆ ಸಿದ್ದರಾಮಯ್ಯ ಇದೀಗ ನೆಪ ಹೇಳುತ್ತಿದ್ದಾರೆ. ಜಾತಿಗಣತಿಯನ್ನು ಅಂಗೀಕರಿಸಬೇಕು. ಇಡೀ ದೇಶದಲ್ಲಿಯೇ ಜಾತಿಗಣತಿ ಕಡ್ಡಾಯವಾಗಿ ಆಗಬೇಕು. ಜಾತಿಗಣತಿ ಆಧಾರದ ಮೇಲೆ ಮೀಸಲಾತಿಯನ್ನು ನೀಡಬೇಕು. ಜಾತಿಗಣತಿ ಸ್ವೀಕರಿಸಲಿದ್ದರೆ ನಾವು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು.

ನಾವಿಲ್ಲಿಗೆ ಮತ ಕೇಳಲು ಬಂದಿಲ್ಲ. ಪಕ್ಷ ಸಂಘಟನೆಯ ದೃಷ್ಟಿಯಿಂದ ನಾವಿಲ್ಲಿದ್ದೇವೆ. ಕಳೆದ ಬಾರಿ ನಾವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು. ಆದರೆ, ಹಲವಾರು ಕಾರಣಗಳಿಂದ ಸೋತಿದ್ದೇವೆ. ಹಲವು ವರ್ಷಗಳಿಂದ ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಪುರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಹಲವೆಡೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಇದನ್ನು ಯಾರೂ ಗಮನಿಸದಷ್ಟು ವ್ಯವಸ್ಥೆ ಕೆಟ್ಟುಹೋಗಿದೆ ಎಂದು ತಿಳಿಸಿದರು.

ಬರಪೀಡಿತ ಪರಿಹಾರ ನೀಡುವ ಕುರಿತು ಎಎಪಿ ಬೇಡಿಕೆಗಳು: 1. ಬರಪೀಡಿತ ಪ್ರದೇಶಗಳಲ್ಲಿ ಸರಿಯಾದ ವೈಜ್ಞಾನಿಕ ಸಮೀಕ್ಷೆ ನಡೆಸುವುದು. 2. ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಿ, ತುರ್ತು ಪರಿಸ್ಥಿತಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು. 3. ಬೆಳೆಹಾನಿಯಾದಲ್ಲಿ ರೈತರಿಗೆ ಬೆಳೆ ವಿಮೆಯ ತುರ್ತು ಪಾವತಿ ಮಾಡುವುದು.4. ಬರಪೀಡಿತ ಪ್ರದೇಶಗಳ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು.

5. ಪಶುಸಂಗೋಪನೆಯಲ್ಲಿ ತೊಡಗಿರುವ ಅಥವಾ ರೈತರ ಪ್ರತಿ ಜಾನುವಾರುಗಳಿಗೆ 5 ಸಾವಿರ ರೂ. ನೀಡುವುದು. 6. ಬೆಲೆ ಏರಿಕೆಯನ್ನು ನೀಗಿಸಿ, ಪ್ರತಿ ಕುಟುಂಬಕ್ಕೆ ಉಚಿತ ಪಡಿತರ ಒದಗಿಸಬೇಕು. 7. ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ನೋಡಿಕೊಂಡು, ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಮಾಡಬೇಕು.

ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಮಠ, ಕಾರ್ಯದರ್ಶಿಗಳಾದ ಬಸವರಾಜ್ ಮುದಿಗೌಡರ್ ,ರವಿಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ನವೀನ್ ಚಂದ್ರ ಪೂಜಾರಿ , ರಾಜ್ಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದರ್ಶನ್ ಜೈನ್, ಕೊಪ್ಪಳ ಜಿಲ್ಲಾಧ್ಯಕ್ಷ ನಾರಿ ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ