ನ್ಯೂಡೆಲ್ಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಧನಂಜಯ ಯಶವಂತ್ ಚಂದ್ರಚೂಡ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಸೋಮವಾರ ಆದೇಶ ಹೊರಡಿಸಿದ್ದಾರೆ.
ಹೀಗಾಗಿ ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 9ರಂದು ನ್ಯಾ. ಡಿ.ವೈ. ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರು ಸುದೀರ್ಘ 2 ವರ್ಷಗಳ ಕಾಲ ಸಿಜೆಐ ಆಗಿರಲಿದ್ದು, 2024ರ ನವೆಂಬರ್ 10ರಂದು ನಿವೃತ್ತಿಹೊಂದಲಿದ್ದಾರೆ.
2016ರ ಮೇ 13ರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಡಿ.ವೈ ಚಂದ್ರಚೂಡ್ ಅವರು ಇದೀಗ ಸಿಜೆಐ ಹುದ್ದೆಗೇರುತ್ತಿದ್ದಾರೆ. ಕರ್ನಾಟಕದೊಂದಿಗೂ ನ್ಯಾ. ಡಿ.ವೈ ಚಂದ್ರಚೂಡ್ ನಿಕಟ ಸಂಪರ್ಕ ಹೊಂದಿದ್ದು, ತಮ್ಮ ಬಾಲ್ಯದ ಹಲವು ಸಮಯವನ್ನು ಧಾರವಾಡದ ಸಂಬಂಧಿಗಳ ಮನೆಯಲ್ಲಿ ಕಳೆದಿದ್ದನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನ್ಯಾ. ಚಂದ್ರಚೂಡ್ ಸ್ಮರಿಸಿದ್ದರು.
ನ್ಯಾ. ಡಿ.ವೈ ಚಂದ್ರಚೂಡ್ ಹಿನ್ನೆಲೆ: ನ್ಯಾ. ಡಿ.ವೈ ಚಂದ್ರಚೂಡ್ 1978ರಿಂದ 1985ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೈ.ವಿ ಚಂದ್ರಚೂಡ್ ಅವರ ಪುತ್ರ. ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್‍ನಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಆನರ್ಸ್, ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್ ನಿಂದ ಎಲ್.ಎಲ್.ಬಿ. ಪದವಿ ಪಡೆದಿದ್ದಾರೆ. ಬಳಿಕ ಅಮೆರಿಕದ ಹಾರ್ವರ್ಡ್ ಲಾ ಸ್ಕೂಲ್‍ನಿಂದ ಎಲ್.ಎಲ್.ಎಂ. ಮತ್ತು ಡಾಕ್ಟರ್ ಇನ್ ಜ್ಯುಡಿಷಿಯಲ್ ಸೈನ್ಸಸ್ ಪದವಿ ಪಡೆದಿದ್ದಾರೆ.
ಓದು ಮುಗಿಸಿದ ಬಳಿಕ ಸುಪ್ರೀಂಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಡಿ.ವೈ ಚಂದ್ರಚೂಡ್ ಅವರಿಗೆ ಬಾಂಬೆ ಹೈಕೋರ್ಟ್ 1998ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು. 2000ದಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಸೇವೆ ಸಲ್ಲಿಸಿದ ಇವರನ್ನು 2013ರಲ್ಲಿ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ಹಾಲಿ ಸಿಜೆಐ ಯು.ಯು. ಲಲಿತ್ ನವೆಂಬರ್ 8ರಂದು ನಿವೃತ್ತಿ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಆದೇಶಾನುಸಾರ ಸಿಜೆಐ ಹುದ್ದೆಗೆ ನ್ಯಾ. ಚಂದ್ರಚೂಡ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.