ಮೈಸೂರು: ಜಿಲ್ಲೆಯ ಸರ್ಕಾರಿ ಶಾಲೆಗಳ ಒಟ್ಟು ದಾಖಲಾತಿಯಲ್ಲಿ ಬರೋಬ್ಬರಿ 13 ಸಾವಿರ ಇಳಿಕೆಯಾಗಿರುವುದಕ್ಕೆ ಆಮ್ ಆದ್ಮಿ ಪಾರ್ಟಿಯ ಮೈಸೂರು ಜಿಲ್ಲಾಧ್ಯಕ್ಷೆ ಮಾಲವಿಕ ಗುಬ್ಬಿವಾಣಿ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರಿ ಶಾಲೆಗಳನ್ನು ಕಾಲಕ್ಕೆ ತಕ್ಕಂತೆ ಸಜ್ಜುಗೊಳಿಸಲು ಶಿಕ್ಷಣ ಸಚಿವರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕಳೆದ ವರ್ಷ ಆಗಸ್ಟ್ 10ರ ತನಕ 1.76 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ ಕೇವಲ 1.63 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ತೋರುತ್ತಿರುವ ತೀವ್ರ ನಿರ್ಲಕ್ಷ್ಯದಿಂದಾಗಿ ದಾಖಲಾತಿ ಪ್ರಮಾಣದಲ್ಲಿ 13 ಸಾವಿರ ಕಡಿಮೆಯಾಗಿದೆ ಎಂದು ಹೇಳಿದರು.
ದಾಖಲಾತಿ ಪ್ರಮಾಣ ಕಡಿಮೆಯಾಗಿರುವುದಕ್ಕೆ ಎಲ್ಲ ಕಾರಣಗಳ ಬಗ್ಗೆ ಸರ್ಕಾರವು ಪರಿಶೀಲನೆ ಮಾಡಬೇಕು. ಮುಂದಿನ ವರ್ಷವಾದರೂ ದಾಖಲಾತಿ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಕೋವಿಡ್ ಹಾಗೂ ಲಾಕ್ಡೌನ್‌ಗಳಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದ ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಸಂದರ್ಭದಲ್ಲಿ, ಸರ್ಕಾರಿ ಶಾಲೆಗಳನ್ನು ಹೆಚ್ಚಿನ ಸಂಖೆಯಲ್ಲಿ ತೆರೆದು ಸಾಮಾನ್ಯ ಜನರ ಮಕ್ಕಳಿಗೆ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ನೀಡಿ, ಅವರ ಹೊರೆ ಕಡಿಮೆ ಮಾಡಬೇಕು.
ಆದರೆ ಸರ್ಕಾರದ ನಿಷ್ಕ್ರಿಯತೆಯು ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈಗಿರುವ ಶಾಲೆಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಸರ್ಕಾರಿ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಮಾಲವಿಕ ಗುಬ್ಬಿವಾಣಿ ಆಗ್ರಹಿಸಿದರು.
ಅಸಮರ್ಪಕ ಮೂಲಸೌಕರ್ಯಗಳು, ಶಿಕ್ಷಕರ ಕೊರತೆ, ಸಿಬ್ಬಂದಿಯ ಪ್ರತಿಭಟನೆಗಳು, ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆಯ ನಿರುತ್ಸಾಹ ಮುಂತಾದ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ದೂರವಾಗುತ್ತಿದ್ದಾರೆ.
ಅವರಲ್ಲಿ ಹೆಚ್ಚಿನವರು ಬಡ ಹಾಗೂ ಮಧ್ಯಮ ವರ್ಗದವರಾಗಿದ್ದು, ಕೆಲವು ಪೋಷಕರು ಸಾಲ ಮಾಡಿ ಮಕ್ಕಳನ್ನು ಖಾಸಗಿ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಸೇರಿಸಲು ಸಾಧ್ಯವಾಗದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯ ಸರ್ಕಾರವು ನಾಡಿನ ಭವಿಷ್ಯದ ಅಡಿಪಾಯವನ್ನು ಅಲುಗಾಡಿಸುವ ಕೆಲಸ ಮಾಡುತ್ತಿದೆ ಎಂದು ಮಾಲವಿಕ ಗುಬ್ಬಿವಾಣಿ ಆಕ್ರೋಶ ವ್ಯಕ್ತಪಡಿಸಿದರು.