ಮೈಸೂರು : ಹೊಲದಲ್ಲಿ ತೊಗರಿಕಾಯಿ ಕೀಳುತ್ತಿದ್ದ ವೃದ್ಧ ರೈತನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ವೃದ್ಧರ ಕಾಲು ಮುರಿದಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಆಕಲ ಗ್ರಾಮದಲ್ಲಿ ನಡೆದಿದೆ.
ಕಾಡಾನೆ ದಾಳಿಗೆ ರೈತ ಬೋಳಯ್ಯ (75) ಎಂಬುವರ ಬಲಗಾಲು ಮುರಿದಿದ್ದು, ಸ್ಥಳದಲ್ಲೇ ನೋವಿನಿಂದ ನರಳುತ್ತಿದ್ದರು. ಬೋಳಯ್ಯ ತಮ್ಮ ಜಮೀನಿನಲ್ಲಿ ತೊಗರಿ ಕಾಯಿ ಕೀಳುತ್ತಿದ್ದಾಗ ಅಲ್ಲೇ ಪೊದೆಯಲ್ಲಿದ್ದ ಕಾಡಾನೆ ರೈತ ಬೋಳಯ್ಯನ ಮೇಲೆ ದಾಳಿ ಮಾಡಿದೆ. ಪರಿಣಾಮ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಕ್ಷಣ ಸ್ಥಳೀಯರು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಬೋಳಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಂದ್ರವಾಡಿ, ಆಕಲ, ನೆಲಿತಾಳಪುರ, ಅಲ್ಲಯ್ಯನಪುರ ಇನ್ನು ಮೊದಲಾದ ಗ್ರಾಮಗಳಲ್ಲಿ ಸುಮಾರು ಎರಡು ವಾರಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗೆ ಓಡಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಈ ಭಾಗದ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಕಾಡಾನೆಗಳನ್ನು ಕಾಡಿಗೆ ಓಡಿಸುವಂತ ಒತ್ತಾಯಿಸಿದರೂ ಯಾವೊಬ್ಬ ಅರಣ್ಯ ಅಧಿಕಾರಿಯೂ ಇತ್ತ ತಿರುಗಿ ನೋಡದೆ ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಇದ್ದಾರೆ ಎಂದು ದೂರಿದ್ದಾರೆ.
ಶಾಸಕ ದರ್ಶನ್ ಧ್ರುವ ನಾರಾಯಣ್ ಅವರಿಗೆ ಕಾಡಾನೆಗಳಿಂದ ಆಗುತ್ತಿರುವ ತೊಂದರೆಯನ್ನು ಜನಸಂಪರ್ಕ ಸಭೆಯಲ್ಲಿ ಸುಮಾರು 20 ದಿನಗಳ ಹಿಂದೆ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿರುವ ರೈತರು ಈ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟು ರೈತರು ಬೆಳೆದ ಬೆಳೆಗಳನ್ನು ಧ್ವಂಸ ಮಾಡುತ್ತಿದ್ದು ನಾವು ಹೊಲ ಗದ್ದೆಗೆಗಳಿಗೆ ಹೋಗಲು ಭಯಪಡುವಂತಾಗಿದೆ ಎಂದು ಹೇಳಿದ್ದಾರೆ.
ಇನ್ನು ಇದು ಹೀಗೆಯೇ ಮುಂದುವರಿದರೆ ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದು, ಇನ್ನಾದರೂ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ರೈತರ ಕಷ್ಟವನ್ನು ಅರಿತು ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ. ಅಲ್ಲದೇ ಕಾಡಾನೆ ದಾಳಿಯಿಂದ ಸಂಕಷ್ಟಕ್ಕೀಡಾಗಿರುವ ರೈತ ಬೋಳಯ್ಯ ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.