ಕನಿಷ್ಠ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರು ಪ್ರತಿಭಟನೆ- ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡು ವಿನೂತನ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ಬಿಎಂಟಿಸಿ & ಕೆಎಸ್ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಇಪಿಎಸ್ ನಿವೃತ್ತರು ಆಗಮಿಸಿದ್ದರು.
ಸರಳ ಬದುಕಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿರುವ ಎಪ್ಪತ್ತು, ಎಂಬತ್ತರ ವೃದ್ಧರು ಬೇಸಿಗೆ ಮಧ್ಯಾಹ್ನದ ಕಡು ಬಿಸಿಲಿನಲ್ಲಿ, ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ, ಪಥ ಸಂಚಲನ ನಡೆಸಿ, ಧಿಕ್ಕಾರದ ಘೋಷಣೆಯೊಂದಿಗೆ ಮನವಿ ಪತ್ರವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಮೂಲಕ ಕೇಂದ್ರ ಸಚಿವರಿಗೆ ಸಲ್ಲಿಸಿದರು.
ಸಂಘದ ಖಜಾಂಚಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ನಾವು ನಮ್ಮ ಹೋರಾಟವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ನಡೆಸಿದ್ದರೂ ಸಹ ಪ್ರತಿಫಲ ಸಿಗದೇ ಇರುವುದು ಭಾರಿ ಬೇಸರದ ಸಂಗತಿ ಎಂದು ಆಕ್ರೋಶ ಹೊರಹಾಕಿದರು.
ಅಧಿಕ ಪಿಂಚಣಿಯನ್ನು ಈಪಿಎಸ್ ನಿವೃತ್ತರಿಗೆ ನಿರಾಕರಿಸಿ, ಇಪಿಎಫ್ಒ ಅಧಿಕಾರಿಗಳು ನೀಡಿರುವ ಹಿಂಬರಹಕ್ಕೆ ಸಂಬಂಧಿಸಿದಂತೆ, ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತೀವ್ರ ಅಕ್ರೋಶ ವ್ಯಕ್ತಪಡಿಸಿ, ಈ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮನ್ನು ನಿರ್ಲಕ್ಷಿಸಿ, ತಾವು ಮಾತ್ರ ಎಲ್ಲ ಸವಲತ್ತುಗಳನ್ನು ಪಡೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಅಧಿಕಾರಿಗಳು, ಇಪಿಎಸ್ ಪಿಂಚಣಿದಾರರಿಗೆ ಅಧಿಕ ಪಿಂಚಣಿ ನೀಡಬಾರದು ಎಂದು ಹುನ್ನಾರ ನಡೆಸಿದ್ದು, ಯಾರು ಧೃತಿಗೆಡಬಾರದು, ಇಂದಲ್ಲ ನಾಳೆ ನಾವು ಅಧಿಕ ಪಿಂಚಣಿ ಹಾಗೂ ಕನಿಷ್ಠ ಹೆಚ್ಚುವರಿ ಪಿಂಚಣಿ ಪಡೆದೆ ತೀರುತ್ತವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.

ಸಂಘದ ಕಾರ್ಯಾಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ಕಮಾಂಡರ್ ಅಶೋಕ್ ರಾವುತ್ ಅವರು ಪ್ರತಿಪಾದಿಸಿರುವ ಕನಿಷ್ಠ ಹೆಚ್ಚುವರಿ ಪಿಂಚಣಿ ₹7500 + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ನೀಡುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಮಾತನಾಡಿ, ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥರಾದ ಕಮಾಂಡರ್ ಅಶೋಕ್ ರಾಹುತ್ ಅವರ ತಂಡ ದೆಹಲಿಯಲ್ಲಿ ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಚಿವರ ಜೊತೆ ಮಾತುಕತೆ ನಡೆಸುತ್ತಿದ್ದು, ನಮ್ಮ ಎಲ್ಲ ಮೂಲಭೂತ ಬೇಡಿಕೆಗಳು ಇಷ್ಟರಲ್ಲಿಯೇ ಈಡೇರಲ್ಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ, ಕುಲಕರ್ಣಿ ಮಾತನಾಡಿ, ಇಪಿಎಸ್ ನಿವೃತ್ತರು ಈಗಾಗಲೇ ಸಾಕಷ್ಟು ದೂರ ಕ್ರಮಿಸಿದ್ದು, ನಮ್ಮ ನಾಯಕರು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಸಿರುವ ಮಾತುಕತೆ ಫಲಪ್ರದವಾಗುವ ಎಲ್ಲಾ ಲಕ್ಷಣಗಳಿದ್ದು, ಫಲಿತಾಂಶಕ್ಕಾಗಿ ಕಾಯೋಣ ಎಂದರು.
ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಡು ಹಾಗೂ ಮತ್ತೊಬ್ಬ ಪದಾಧಿಕಾರಿ ಡಿಸ್ಕೋ ಶ್ರೀನಿವಾಸ್ ರವರು ಮಾತನಾಡಿ, ಎಲ್ಲಾ ಇಪಿಎಸ್ ನಿವೃತ್ತರು ಒಂದಾಗಿ, ಸಂಘಟನಾತ್ಮಕವಾಗಿ ಹೋರಾಟ ಮಾಡಿದಲ್ಲಿ, ನಮ್ಮ ಎಲ್ಲ ಬೇಡಿಕೆಗಳು ಈಡೇರಲಿವೆ ಎಂದರು.
ಮನವಿ ಪತ್ರಗಳನ್ನು ಸ್ವೀಕರಿಸಲು ಸ್ಥಳಕ್ಕೆ ಬಂದ ಇಪಿಎಫ್ಒ ಅಧಿಕಾರಿಗಳನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು, ಮನವಿ ಪತ್ರವನ್ನು ಸ್ವೀಕರಿಸಿ, ಮಾತನಾಡಿದ ಅಧಿಕಾರಿಗಳು, ಇಂದಿನ ನಿಮ್ಮೆಲ್ಲ ಸಂಪೂರ್ಣ ಚಿತ್ರಣವನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೂ ಹಾಗೂ ದೆಹಲಿಯಲ್ಲಿರುವ ತಮ್ಮ ಮೇಲಧಿಕಾರಿಗಳಿಗೆ ಕಳುಹಿಸಿ ಕೊಡುತ್ತೇವೆ ಎಂದರು.
ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಮೇಲೂರು ಅಮರ್ ಹಾಗೂ ಸಂಘದ ಪದಾಧಿಕಾರಿಗಳಾದ ನಾಗರಾಜು, ಮನೋಹರ್, ಕೃಷ್ಣಮೂರ್ತಿ ಸೇರಿದಂತೆ ನೂರಾರು ನಿವೃತ್ತರು ಭಾಗವಹಿಸಿದ್ದರು.
Related
