NEWSನಮ್ಮರಾಜ್ಯಬೆಂಗಳೂರು

ನಾಳೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ EPS ಪಿಂಚಣಿದಾರರ ಪ್ರತಿಭಟನೆ: BMTC & KSRTC ನಿ.ನೌಕರರ ಸಂಘದ ಅಧ್ಯಕ್ಷ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರ 32ನೇ ಪ್ರತಿಭಟನಾ ಸಭೆ ಇದೇ ಅ.27ರ ಸೋಮವಾರ ಬೆಳಗ್ಗೆ 10:30ಕ್ಕೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಕ್ಟೋಬರ್ 9, 11, 12ರಂದು ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಜರುಗಿದ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನಾ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ನಡೆಸಿದ ಹೋರಾಟ ದೇಶಾದ್ಯಂತ ಸುದ್ದಿಯಾಗಿತ್ತು. ಹೀಗಾಗಿ ಈ ಬಾರಿ ನಮ್ಮ ಜಯ ಶತಸಿದ್ಧ ಎಂದು ಭಾವಿಸಿದ್ದೆವು.

ಆದರೆ, ಮಾರನೇ ದಿನ ದೆಹಲಿಯಲ್ಲಿ ಜರುಗಿದ 238ನೇ ಸಿಬಿಟಿ ಸಭೆಯಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳು ಪ್ರಸ್ತಾವನೆಯನ್ನೇ ಮಂಡಿಸದೆ, 78 ಲಕ್ಷ ಇಪಿಎಸ್ ನಿವೃತ್ತರನ್ನು ತೀವ್ರ ನಿರಾಶೆಗೊಳಿಸಿದ್ದು, ಕೂಡಲೇ ನಮ್ಮ ಮುಖಂಡರಾದ ಕಮಾಂಡರ್ ಅಶೋಕ್ ರಾವುತ್ ಹಾಗೂ ತಂಡದವರು ಸಿಬಿಟಿ ಸಭೆಯಲ್ಲಿಯೇ ಸಚಿವರು ಹಾಗೂ ಸಿಬಿಟಿ ಅಧ್ಯಕ್ಷರಾದ ಮುನ್ಸೂಖ್ ಮಂಡವಿಯ ಅವರನ್ನು ಕಂಡು, ನಮ್ಮ ಎಲ್ಲ ಬೇಡಿಕೆಗಳಿಗೆ ಬಗ್ಗೆ ಮನವಿ ಪತ್ರ ಸಲ್ಲಿಸಿದರು.

ಇನ್ನು ಈ ಬಗ್ಗೆ ಸಚಿವರು ತನ್ನ ಅಧಿಕಾರಿಗಳ ಮೂಲಕ ಭರವಸೆಯ ಪತ್ರವನ್ನು ನೀಡಿರುವ ಸಂಗತಿ ತಮಗೆಲ್ಲ ತಿಳಿದಿದೆ. ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು, ಒಂದು ವೇಳೆ ಮಾತು ತಪ್ಪಿದಲ್ಲಿ, ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು. ಏನೇ ಆಗಲಿ ಮುಂದಿನ ಹೋರಾಟ ಇನ್ನೂ ತೀವ್ರಗೊಳ್ಳಲಿದೆ ಎಂದು ನಂಜುಂಡೇಗೌಡ ತಿಳಿಸಿದ್ದಾರೆ.

ನಮ್ಮ ಹೋರಾಟ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಹೈಯರ್ ಪಿಂಚಣಿ (ನ್ಯಾಯಾಲಯದ ತೀರ್ಪಿನ ಪ್ರಕಾರ) ಎರಡೂ ಅಂಶಗಳು ಈಡೇರುವವರೆಗೂ ಈ ಹೋರಾಟ ನಿಲ್ಲದು. ಈ ದೆಶೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯಕವಾಗಿದೆ. ಈ ಹೋರಾಟದ ಸಂದೇಶ ದೆಹಲಿ ತಲುಪಬೇಕು. ಈ ದೃಷ್ಟಿಯಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ಪ್ರತಿಭಟನಾ ಸಭೆಗೆ ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಜೆಎಸ್ಎಂ ಸ್ವಾಮಿ, ನಮ್ಮ ಸಂಘದ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದು, ಲಿಖಿತ ರೂಪದಲ್ಲಿ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು. ತಪ್ಪಿದಲ್ಲಿ ಮುಂದಿನ ಆಗುಹೋಗುಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಶಾಂತಿಯುತ ಪ್ರತಿಭಟನೆ ಹಾಗೂ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಪತ್ರ ಸಲ್ಲಿಸುವ ಸಭೆಗೆ ಎಲ್ಲ ಇಪಿಎಸ್ ನಿವೃತ್ತರು ಆಗಮಿಸಿ, ಭಾಗವಹಿಸಬೇಕೆಂದು ಮತ್ತೊಮ್ಮೆ ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.

Megha
the authorMegha

Leave a Reply

error: Content is protected !!