NEWSನಮ್ಮಜಿಲ್ಲೆನಮ್ಮರಾಜ್ಯ

ಬೆಳ್ಳಂಬೆಳಗ್ಗೆ ಕೊರೆಯುವ ಚಳಿ ಕೂಡ ಲೆಕ್ಕಿಸದೆ ನವ ತರುಣರಂತೆ ಲಾಲ್‌ಬಾಗ್‌ಗೆ ಬಂದ EPS ಪಿಂಚಣಿದಾರರು- ತೆಗೆದುಕೊಂಡರು ಬಿಸಿ ಮುಟ್ಟಿಸುವ ನಿರ್ಧಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಇಪಿಎಸ್ ಪಿಂಚಣಿದಾರರು ಲಾಲ್‌ಬಾಗ್‌ಗೆ ಬೆಳ್ಳಂಬೇಳಗ್ಗೆ ಆಗಮಿಸಿ 95ನೇ ಮಾಸಿಕ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾವೇನು ಯಾವುದೇ ಯುವಕರಿಗಿಂತ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಜತೆಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದರಲ್ಲಿ ಎರಡನೇ ಮಾತಿಲ್ಲ ಎಂಬ ಸಂದೇಶವನ್ನು ಕೇಂದ್ರ ಕಾರ್ಮಿಕ ಸಚಿವರಿಗೆ ರವಾನಿಸಿದ್ದಾರೆ.

ಭಾನುವಾರ (ಡಿ.7) ಬೆಳಗ್ಗೆ 8ಗಂಟೆಗೆ ಎಲ್ಲ ನಿವೃತ್ತ ಇಪಿಎಸ್‌ ಸದಸ್ಯರು ಲಾಲ್‌ಬಾಗ್‌ಗೆ ಬಂದು 95ನೇ ಮಾಸಿಕ ಸಭೆಯಲ್ಲಿ ಭಾರಿ ಉತ್ಸುಕರಾಗಿಯೇ ಭಾಗವಹಿಸಿದ್ದು ನವ ತರುಣರನ್ನು ನಾಚಿಸುವಂತಿತ್ತು. ಇನ್ನು ದೇಶಾದ್ಯಂತ ಇರುವ ಇಪಿಎಸ್ ಪಿಂಚಣಿದಾರರ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ನಾವು ಕಳೆದ ಏಳೆಂಟು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ ಆದರೆ ನಾವು ನಡೆಸುತ್ತಿರುವ ಪ್ರತಿಭಟನೆಗೆ ಈವರೆಗೂ ಯಾವುದೇ ಪ್ರತಿಫಲ ದೊರೆಯದೇ ಇರುವುದು ತುಂಬ ಬೇಸರ ತರಿಸುತ್ತಿದೆ. ಆಳುವ ಸರ್ಕಾರಗಳ ಪ್ರತಿನಿಧಿಸುತ್ತಿರುವ ಪ್ರಧಾನಿ, ಸಚಿವ ಅಪ್ಪ ಅಮ್ಮ ಈ ರೀತಿ ನಮಗೆ ಅನ್ಯಾಯವಾಗುತ್ತಿದೆ ಎಂದು ಇಳಿವಯಸ್ಸಿನಲ್ಲಿ ಬೀದಿಗೆ ಬಂದಿದ್ದರೆ ಇವರು ಈ ರೀತಿ ಸುಮ್ಮನಿರುತ್ತಿದ್ದರೆ. ವಯಸ್ಸಾದ ನಮ್ಮನ್ನು ಆ ಸ್ಥಾನದಲ್ಲಿ ಏಕೆ ನೋಡುತ್ತಿಲ್ಲ ಈ ರಾಜಕಾರಣಿಗಳು ಎಂದು ಸದಸ್ಯರು ತಮ್ಮ ಬೇಸರ ವ್ಯಕ್ತಪಡಿಸಿದರು.

ಇನ್ನು ಪಾರ್ಲಿಮೆಂಟ್ ಚಳಿಗಾಲದ ಅಧಿವೇಶನ ಡಿಸೆಂಬರ್ 19, 2025 ರವರೆಗೆ ನಡೆಯಲಿದೆ. ಈ ಅವಧಿಯಲ್ಲಾದರೂ ನಮ್ಮ ಸಂಸದರು ಇಪಿಎಸ್ ನಿವೃತ್ತರ ಪರ ಲೋಕಸಭಾ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದುಮನವಿ ಮಾಡಲು ಈ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರ ತೆಗೆದುಕೊಂಡಿದ್ದಾರೆ.

ದೇಶಾದ್ಯಂತ ಇರುವ ಹಲವಾರು ಉಚ್ಚ ನ್ಯಾಯಾಲಯಗಳು ಇಪಿಎಸ್ ನಿವೃತ್ತರ ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ತನ್ನ ತೀರ್ಪು ನೀಡಿ, ದೋಷಪೂರಿತ ಟ್ರಸ್ಟ್ ರೂಲ್ಸ್ ಬದಿಗಿಟ್ಟು, ಎಲ್ಲ ಇಪಿಎಸ್ ನಿವೃತ್ತರಿಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಅಧಿಕ ಪಿಂಚಣಿ ನೀಡುವಂತೆ ಆದೇಶಿಸಿದ್ದು, ಇವೆಲ್ಲವೂ ಕೂಡ ಸಕಾರಾತ್ಮಕ ಬೆಳವಣಿಗೆಗಳಾಗಿವೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಮಾಸಿಕ ಸಭೆಯನ್ನು ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು. ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್ ಎಲ್ಲ ಇಪಿಎಸ್ ನಿವೃತ್ತರನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷ ನಂಜುಂಡೇಗೌಡ ಕಾನೂನಿಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ, ನಮ್ಮಲ್ಲಿ ಕಾಯುವ ತಾಳ್ಮೆಯಿದ್ದಲ್ಲಿ, ನ್ಯಾಯಕ್ಕೆ ಇಂದಲ್ಲ, ನಾಳೆ ಜಯ ಶತಸಿದ್ಧ ಎಂದು ಹೇಳಿದರು.

ಬಿಎಂಟಿಸಿಯಲ್ಲಿ ನಿರ್ವಾಹಕಿ ಹಾಗೂ ರಂಗಭೂಮಿ ಕಲಾವಿದೆ ಪಿ.ಉಮಾ ವಿಶೇಷ ಆಹ್ವಾನಿತರಾಗಿ ಸಭೆಗೆ ಆಗಮಿಸಿ, ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರು ಇದುವರೆವಿಗೂ ನಡೆಸಿಕೊಂಡು ಬಂದಿರುವ ಸುದೀರ್ಘ ಪಿಂಚಣಿ ಹೋರಾಟದ ಬಗ್ಗೆ ಆಶ್ಚರ್ಯದ ಜತೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೆ ಈ ಆಂದೋಲನದಲ್ಲಿ ತಾನು ಈ ಹಿಂದೆಯು ಹಲವಾರು ಬಾರಿ ಭಾಗಿಯಾಗಿದ್ದು, ನಮ್ಮ ಭವಿಷ್ಯದ ದೃಷ್ಟಿಯ ನಿಟ್ಟಿನಲ್ಲಿ ಹಾಲಿ ಸೇವೆಯಲ್ಲಿರುವ ಸಂಸ್ಥೆಯ ನೌಕರರನ್ನು ಒಗ್ಗೂಡಿಸಿ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸುವುದಾಗಿ ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ರುಕ್ಮೇಶ್, ಕೃಷ್ಣಮೂರ್ತಿ ಅರ್ಥ ಪೂರ್ಣ ಚರ್ಚೆಯೊಂದಿಗೆ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

Megha
the authorMegha

Leave a Reply

error: Content is protected !!