ದಶಕದಿಂದ ಇಪಿಎಸ್ ನಿವೃತ್ತರು ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಕಿವಿಗೊಡದ ಕೇಂದ್ರ: ನಂಜುಂಡೇಗೌಡ ಅಸಮಾಧಾನ


ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಇಪಿಎಸ್ ನಿವೃತ್ತರು ದಶಕದಿಂದ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಸಹಾ ಕೇಂದ್ರ ಸರ್ಕಾರ ಕಿವಿಗೊಡದೆ ಇರುವುದು ಅತ್ಯಂತ ಶೋಚನೀಯ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಲ್‌ಬಾಗ್ ಆರವರಣದಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಭಾನುವಾರ ಜರುಗಿದ ಇಪಿಎಸ್ ಪಿಂಚಣಿದಾರರ 90ನೇ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಜುಲೈ 11ರಂದು ಸಿಬಿಟಿ ಸಭೆ ಇದ್ದು, ಜುಲೈ 21 ರಿಂದ ಪಾರ್ಲಿಮೆಂಟ್‌ನ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದೆ. ಈ ಬಾರಿಯಾದರೂ ನಮ್ಮ ರಾಜ್ಯದ ಸಂಸದರು ಸಂಸತ್‌ನಲ್ಲಿ ಧ್ವನಿಯೆತ್ತಲೇ ಬೇಕು ಸಭೆಯ ಮೂಲಕ ಸಂಸದರಿಗೆ ಆಗ್ರಹಿಸಿದರು.
ಇನ್ನು ಏನೇ ಆಗಲಿ 78 ಲಕ್ಷ ಇಪಿಎಸ್ ನಿವೃತ್ತರ ಪರ ನಡೆಸುತ್ತಿರುವ ಈ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಶತಸಿದ್ಧ. ಆಗಸ್ಟ್ 04 ಮತ್ತು 05, 2025 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ದೇಶಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಎನ್ಎಸಿ ತಿಳಿಸಿದ್ದಾರೆ.
ಆ ಹೋರಾಟದಲ್ಲಿ ನಮ್ಮ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯ ನಿವೃತ್ತರು ಭಾಗವಹಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದ್ದರು. ಈ ಹೋರಾಟದಲ್ಲಿ ಭಾಗವಹಿಸಲು ಇಚ್ಛಿಸುವ ನಿವೃತ್ತರು ಕೂಡಲೇ ತಮ್ಮ ಮುಂಗಡ ರೈಲ್ವೆ ಟಿಕೆಟ್ ಕಾಯ್ದಿರಿಸುವ ಮೂಲಕ ಎನ್ಎಸಿ ಕಾರ್ಯಕಾರಿ ಸಮಿತಿ ಸದಸ್ಯರಿಗೆ ತಿಳಿಸಬೇಕೆಂದು, ಸಭೆಯಲ್ಲಿ ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ಮುಗಿಯುವುದಿಲ್ಲ, ಕಮಾಂಡರ್ ಅಶೋಕ್ ರಾಹುತ್ ಅವರು ಪ್ರತಿಪಾದಿಸುತ್ತಿರುವ ಕನಿಷ್ಠ ಹೆಚ್ಚುವರಿ ಪಿಂಚಣಿ ರೂ. 7500 ಮತ್ತು ಭತ್ಯೆ, ವೈದ್ಯಕೀಯ ಸೌಲಭ್ಯ ಇವೆಲ್ಲವೂ ನಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುವವರೆಗೆ ಈ ಹೋರಾಟ ನಿಲ್ಲದು ಎಂದು ಹೇಳಿದರು.

ಇನ್ನು ಇದೇ ಜುಲೈ 27 ರಂದು ಹುಬ್ಬಳ್ಳಿಯಲ್ಲಿ ಇಪಿಎಸ್ ನಿವೃತ್ತರ ಬೃಹತ್ ಸಮಾವೇಶ ನಡೆಯುತ್ತಿದ್ದು, ನಾವೆಲ್ಲರೂ ಭಾಗವಹಿಸೋಣ ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ನಾವೆಲ್ಲರೂ “ದೆಹಲಿ ಯಾತ್ರೆ” ಕೈಗೊಳ್ಳುವುದು ಒಂದೇ ಮಾರ್ಗ, ಒಟ್ಟಾಗಿ ಆಗಸ್ಟ್ 4 ಮತ್ತು 5 ರಂದು ದೆಹಲಿಯಲ್ಲಿ ನಡೆಯುವ ಬೃಹತ್ ಆಂದೋಲನದಲ್ಲಿ ಭಾಗವಹಿಸೋಣ ಎಂದರು.
ಸಭೆಗೂ ಮೊದಲು ಎಲ್ಲ ನಿವೃತ್ತರನ್ನು ಸಂಘದ ಖಜಾಂಚಿ ಡೋಳಪ್ಪನವರು ಸ್ವಾಗತಿಸಿ, ಜೂನ್ 27 ರಂದು ಇಪಿಎಫ್ಓ ಕಚೇರಿ ಆವರಣದಲ್ಲಿ ಜರುಗಿದ ಪ್ರತಿಭಟನೆ ಅತ್ಯಂತ ಪರಿಣಾಮಕಾರಿಯಾಗಿತ್ತು, ಭಾಗಿಯಾಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳಾದ ನಾಗರಾಜ, ರುಕ್ಮೇಶ್ & ಕೃಷ್ಣಮೂರ್ತಿ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ನಾವು ಬದ್ಧ ಎಂದು ಸದಸ್ಯರು ಹರ್ಷ ವ್ಯಕ್ತಪಡಿಸಿದರು.
Related
