ಬೆಂಗಳೂರು: ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಅಂತರ ರಾಜ್ಯ ಸಾರಿಗೆ ಸಂಚಾರಕ್ಕೆ 15 ವರ್ಷಗಳ ಬಳಿಕ ಕೆಎಸ್‌ಆರ್‌ಟಿಸಿ ಮತ್ತು ಎಪಿಎಸ್‌ಆರ್‌ಟಿಸಿ ನಡುವೆ ಕಳೆದ ಫೆಬ್ರವರಿಯಲ್ಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಈವರೆಗೂ ಆ ಒಪ್ಪಂದ ಜಾರಿಗೆ ಬಂದಿಲ್ಲ.
ಹೌದು! ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಆಂಧ್ರಪ್ರದೇಶದ ಮತ್ತಷ್ಟು ಭಾಗಗಳಿಗೆ ಕರ್ನಾಟಕದಿಂದ ಸಂಚಾರ ಆರಂಭಿಸಲಿವೆ ಎಂದು ಅಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೂ ಈವರೆಗೂ ಕೇವಲ ಒಂದೇ ಒಂದು ಬಸ್‌ಅನ್ನು ಹೆಚ್ಚುವರಿಯಾಗಿ ಇಳಿಸಿಲ್ಲ. ಇದರಿಂದ ಆಂಧ್ರ ಕರ್ನಾಟಕ ಗಡಿ ಭಾಗದಲ್ಲಿ ಪ್ರಯಾಣಿಸುವ ಸಾರ್ವಜನಿಕರು ಇನ್ನಷ್ಟು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ ಇದುವರೆಗೆ ಒಂದು ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ 8 ಪೂರಕ ಅಂತಾರಾಜ್ಯ ಸಾರಿಗೆ ಒಪ್ಪಂದಗಳು ಏರ್ಪಟ್ಟಿತ್ತು. ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ 2008ರಲ್ಲಿ ಅಂತಾರಾಜ್ಯ ಸಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆ ಬಳಿ ಮತ್ತೆ ಸ್ಥಗಿತವಾಗಿತ್ತು. ಇದೀಗ ಎರಡೂ ರಾಜ್ಯಗಳ ನಡುವೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಈ ಕಾರಣ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲ ಮತ್ತು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು 2023ರ ಫೆಬ್ರವರಿ 3ರಂದು ವಿಜಯವಾಡದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಡಿ. ತಿರುಮಲ ರಾವ್ ಮತ್ತಷ್ಟು ಸಂಚಾರ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದರು.
ಈ ಚರ್ಚೆಯ ಬಳಿಕ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಮಾಡಿಕೊಳ್ಳಬೇಕಾದ ಪ್ರಸ್ತಾಪಿತ 9ನೇ ಪೂರಕ ಅಂತಾರಾಜ್ಯ ಸಾರಿಗೆ ಒಪ್ಪಂದಕ್ಕೆ ರಾಜ್ಯ ಸಾರಿಗೆ ಸಂಸ್ಥೆಗಳ ಮಾರ್ಗಗಳನ್ನು ಅಂತಿಮಗೊಳಿಸಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಈ ಒಪ್ಪಂದದ ಅನ್ವಯ ಪ್ರತಿನಿತ್ಯ ಹೆಚ್ಚುವರಿ ಬಸ್ಸುಗಳನ್ನು ಎರಡು ರಾಜ್ಯಗಳಲ್ಲಿ ಕಾರ್ಯಾಚರಣೆ ಮಾಡಲಿವೆ ಎಂದು ಹೇಳಲಾಗುತ್ತಿದೆ.
ಆದರೆ ಈವರೆಗೂ ನಿತ್ಯ ಹೆಚ್ಚುವರಿ ಬಸ್‌ಗಳು ಓಡಾಡುತ್ತಲೇ ಇಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು 69,321 ಕಿಲೋಮೀಟರ್ ಮತ್ತು ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು 69,284 ಕಿಲೋಮೀಟರ್ ಕಾರ್ಯಚರಿಸಲಿವೆ ಎಂದು ಹೇಳಲಾಗಿದ್ದು ಇನ್ನು ಅದು ಸಮರ್ಪಕವಾಗಿ ಜಾರಿಗೆ ಬಂದಿಲ್ಲ.
ಹೀಗಾಗಿ ಕೂಡಲೇ ಜಾರಿಗೊಳಿಸಿ ಸಾರ್ವಜನಿಕರ ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಶ್ರೀ ಸಾಯಿ ಎಂಬುವರು ಮನವಿ ಮಾಡಿದ್ದಾರೆ.