Search By Date & Category

NEWSಕೃಷಿನಮ್ಮರಾಜ್ಯ

ರೈತರ ಚುನಾವಣಾ ಪ್ರಣಾಳಿಕೆ ಮುಖಾಮುಖಿ ಚರ್ಚೆ- ಕಾಂಗ್ರೆಸ್, ಜೆಡಿಎಸ್, ಎಎಪಿ ಭಾಗಿ: ರೈತರ ಹಿತರಕ್ಷಣೆಗೆ ಬದ್ಧ – ಬಿಜೆಪಿ ಗೈರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸ್ವತಂತ್ರ ಬಂದ 75 ವರ್ಷದಿಂದ ರೈತರನ್ನು ಮೋಸಗೊಳಿಸಿದ್ದೀರಿ, ವಚನಭ್ರಷ್ಟತೆ ತೋರಿದ್ದೀರಿ, ರೈತರಿಗೆ ಆತ್ಮಹತ್ಯೆ ದಾರಿ ತೋರಿಸಿದ್ದೀರಿ, ಉದ್ಯಮಿಗಳಿಗೆ ಕೆಂಪು ಹಾಸಿನ ಸೋಪಾನ ಕಟ್ಟಿದಿರಿ. ಇದು ಸಾಕು ಇನ್ನಾದರೂ ರೈತರನ್ನು ಕಾಪಾಡುವ ಕಾರ್ಯಕ್ಕೆ ಮುಂದಾಗಿ, ರೈತರ ಪ್ರಣಾಳಿಕೆ ಜಾರಿಗೆ ತನ್ನಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರಾಜಕೀಯ ಪಕ್ಷಗಳ ಮುಖಂಡರಿಗೆ ಎಚ್ಚರಿಸಿದರು.

ಇಂದು ಪ್ರೆಸ್ ಕ್ಲಬ್‌ನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ರೈತ ಪ್ರಣಾಳಿಕೆ ಕುರಿತು ರಾಜಕೀಯ ಪಕ್ಷಗಳ ಮುಖ್ಯಸ್ಥರ ಜತೆ ಮುಖಾಮುಖಿ ಚರ್ಚೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶ್ರಿಶಾ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜಕೀಯ ಪಕ್ಷಗಳು ರೈತರ ಪ್ರಣಾಳಿಕೆ ಬಗ್ಗೆ ಗಂಭೀರವಾಗಿ ಗಮನಿಸಬೇಕು, ರೈತರನ್ನು ಮೋಸಗೊಳಿಸುವ ಕುತಂತ್ರ ಮಾಡಬಾರದು, ರೈತರ ಭೂಮಿ ಕಸಿದುಕೊಳ್ಳುವಾಗ ಕುಟುಂಬದ ಜೀವನ ಭದ್ರತೆ ಬಗ್ಗೆ ಚಿಂತಿಸಬೇಕು.

ಹವಾಮಾನ ವೈಪರೀತ್ಯಕ್ಕೆ ಮೊದಲು ಬಲಿಯಾಗುತ್ತಿರುವವನು ರೈತ. ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು, ಮಳೆ ಆಶ್ರಯದ ರೈತರ ರಕ್ಷಣೆಗೆ ವಿಶೇಷ ಪ್ಯಾಕೇಜ್ ನೀಡಬೇಕು. ಮಹಿಳೆಯರಿಗೆ ಶೇಕಡ 50 ಪರ್ಸೆಂಟ್ ಟಿಕೆಟ್ ನೀಡುವ ಮೂಲಕ ರಾಜಕೀಯ ಪಕ್ಷಗಳು ಮಾದರಿಯ ನಡೆ ಅನುಸರಿಸಬೇಕು ಎಂದರು.

ಸಭೆಯಲ್ಲಿದ ರೈತ ಮುಖಂಡರಾದ ನಾರಾಯಣ ರೆಡ್ಡಿ, ವೀರನಗೌಡ ಪಾಟೀಲ್, ತೇಜಸ್ವಿ ಪಟೇಲ್, ಯತಿರಾಜ್ ನಾಯ್ಡು, ಉಳುವಪ್ಪ ಬಳಗೇರ್, ಸುರೇಶ್ ಪಾಟೀಲ್, ರಮೇಶ್ ಉಗಾರ್, ಲಕ್ಷ್ಮೀದೇವಿ, ವಕೀಲರಾದ ಕಿಸಾನ್ ಪ್ರಣಾಳಿಕೆ ಮಂಡಿಸಿದರು.

ಸರ್ಕಾರಿ ನೌಕರರಿಗೆ, ಶಾಸಕರಿಗೆ, ಮಂತ್ರಿಗಳಿಗೆ ಎಲ್ಲ ವರ್ಗದವರಿಗೂ ಪ್ರತಿ ತಿಂಗಳು ಸಂಬಳ ರೂಪದಲ್ಲಿ ಕನಿಷ್ಠ ಆದಾಯ ಬರುತ್ತದೆ, ಅದೇ ರೀತಿ ದಿನದಲ್ಲಿ ಕನಿಷ್ಠ 12 ಗಂಟೆ ದುಡಿಯುವ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ ಜಾರಿಗೆ ಬರಬೇಕು. ಪ್ರಾಣಿಗಳ ಹಾವಳಿ, ಹಾಗೂ ದಾಳಿಯಿಂದ ರೈತನ ಬದುಕು ಹಾಳಾಗುತ್ತಿದೆ ಆದಕಾರಣ ಹಗಲು ವೇಳೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು.

ದೇಶದ ಉದ್ಯಮಿಗಳಿಗೆ 10 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ಅತಿವೃಷ್ಟಿ ಹಾನಿ ಕೊರೊನಾ ಸಂಕಷ್ಟದಿಂದ ತತ್ತರಿಸಿರುವ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು.

ದೇಶದ 135 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತನಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತಾ ಯೋಜನೆ ಜಾರಿಗೆ ಬರಬೇಕು.

ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಕೈ ಬಿಡುವುದಾಗಿ ಭರವಸೆ ನೀಡಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಶಾಸನ ಜಾರಿ, ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು.

ಫಸಲ್ ಬಿಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಅನ್ವಯ ಮಾಡಬೇಕು. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು, ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು ಆಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು.

ರಾಜ್ಯದ ಕಬ್ಬು ಬೆಳೆಗಾರರಿಗೆ ವಂಚನೆ ಎಸೆಗುತ್ತಿರುವ ಕಾನೂನುಗಳನ್ನ ಉಲ್ಲಂಘನೆ ಮಾಡುತ್ತಿರುವ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿ ಕೊಳ್ಳಬಾರದು.

ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ಭರವಸೆ ನೀಡಬೇಕು. 60 ವರ್ಷ ತುಂಬಿದ ರೈತರಿಗೆ 5ಸಾವಿರ ರೂ. ಪಿಂಚಣಿ ನೀಡಬೇಕು.

ರೈತ ಪ್ರಣಾಳಿಕೆ ಕುರಿತು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರೊಫೆಸರ್ ರಾಧಾಕೃಷ್ಣ, ಜಾತ್ಯತೀತ ಜನತಾದಳದ ಪರವಾಗಿ, ಶ್ರೀಕಂಠೇಗೌಡ, ಅಮ್ ಅದ್ಮಿ ಪಕ್ಷದ ಪರವಾಗಿ ಬಿ.ಟಿ. ನಾಗಣ್ಣ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವೀರನಗೌಡ ಪಾಟೀಲ್ ಸ್ವಾಗತಿಸಿದರು,ಎನ್ ಎಚ್ ದೇವಕುಮಾರ್ ವಂದನಾರ್ಪಣೆ ಮಾಡಿದರು. ಏ.10ನೇ ತಾರೀಖಿನ ಒಳಗಾಗಿ ರಾಜ್ಯ ಸಮಿತಿ ಸಭೆ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ರೈತ ಮುಖಂಡರ ಸಭೆ ನಡೆಸಿ ಇಂದಿನ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳ ಅಭಿಪ್ರಾಯ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲು ಸಂಘಟನೆಗಳ ಪದಾಧಿಕಾರಿಗಳು ತೀರ್ಮಾನಿಸಿದರು ಎಂದು ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

Leave a Reply

error: Content is protected !!