NEWSಕೃಷಿಮೈಸೂರು

ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ ರೈತರಿಗೆ ನ್ಯಾಯ ಸಮ್ಮತ ಪರಿಹಾರ ಕೊಡಿ: ಇಂಧನ ಸಚಿವ ಜಾರ್ಜ್‌ಗೆ ರೈತ ಸಂಘ ಮನವಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರೈತರ ಜಮೀನಿನ ಮೇಲೆ 66/11 ಕೆವಿ ಮತ್ತು 220 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ನಿಗಮದ ತಂತಿ ಹಾದು ಹೋಗಿದ್ದು, ಕೆಳಗೆ ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ ರೈತರಿಗೆ ನ್ಯಾಯ ಸಮ್ಮತ ಭೂ ಪರಿಹಾರ ಕೊಡಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಂಧನ ಸಚಿವರಿಗೆ ಒತ್ತಾಯಿಸಲಾಯಿತು.

ಇಂದು ಮೈಸೂರು ಜಿಲ್ಲಾ ಘಟಕ ನಿಯೋಗ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಹುಣಸೂರು ಉಪ ವಿಭಾಗದ ಗೆಜ್ಜೆಯನವಡ್ಡರಗುಡಿ ಗ್ರಾಮದ ಮಿನಿ ಸ್ಟೇಷನ್‌ನಿಂದ ಹಾದು ಹೋಗುವ ಲೈನುಗಳ ಊರುಗಳು ಗೆಜ್ಜೆಯನ ವಡ್ಡರಗುಡಿ, ಧರ್ಮಾಪುರ, ಕರಿಮುದ್ದನಹಳ್ಳಿ, ಆಸ್ಪತ್ರೆ ಕಾವಲ್, ಬಸ್ತಿ ಮಾರನಹಳ್ಳೀ, ಹಳ್ಳದ ಕೊಪ್ಪಲು, ಉದ್ದೂರು ಕಾವಲ್, ತರಿಕಲ್, ತರಿಕಲ್ ಕಾವಲ್ ಮುಂತಾದ ಗ್ರಾಮಗಳ ರೈತರ ಜಮೀನುಗಳ ಮೇಲೆ ವಿದ್ಯುತ್ ಲೈನ್ ಹಾದು ಹೋಗಿರುವ ಮತ್ತು ಟವರ್ ನಿರ್ಮಾಣ ಮಾಡಿರುವ ಜಾಗಕ್ಕೆ ಭೂಮಿ ಪರಿಹಾರ ನೀಡುವ ಬಗ್ಗೆ ಯಾವುದೇ ಸ್ಪಷ್ಟವಾದ ಕ್ರಮ ಜಾರಿಯಾಗಿಲ್ಲ ಎಂದು ಸಚಿವರ ಗಮನಕ್ಕೆ ತಂದರು.

ಇನ್ನು ಅಧಿಕಾರಿಗಳು ಈ ಸಂಬಂಧ ಕಾರ್ಯ ನಿರ್ವಹಿಸಲು ಸಭೆ ನಡೆಸಿದ್ದು, ಜಮೀನಿನ ರೈತರ ಗಮನಕ್ಕೂ ತರದೆ ಹಾಗೂ ಅನುಮತಿ ಪಡೆಯದೆ ಸುಳ್ಳು ವರದಿ ಸೃಷ್ಟಿಸಿ, ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನ ಆದೇಶದ ಪ್ರತಿಯಂತೆ ರೈತರು ಮತ್ತು ಭೂ ಮಾಲೀಕರನ್ನು ಕರೆದು ದರ ನಿರ್ಧಾರ ಮಾಡಿದ್ದೇವೆಂದು 05-03-2024 ರಂದು ಉಪವಿಭಾಗಾಧಿಕಾರಿಗಳು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.

ಪುನಃ ಮಾಹಿತಿ ಹಕ್ಕಿನಡಿಯಲ್ಲಿ ಯಾವ ರೈತರು, ಜಮೀನುಗಳ ಮಾಲೀಕರು ಸಭೆಯಲ್ಲಿ ಹಾಜರಿದ್ದರು ಎಂದು ಮಾಹಿತಿ ಹಕ್ಕಿನಡಿ ಕೋರಿದಾಗ ಯಾರು ಸಭೆಯಲ್ಲಿ ಹಾಜರಾತಿಗೆ ಸಮ್ಮತಿಸದೇ ನಿರಾಕರಿಸಿದ್ದಾರೆ ಎಂದು ಸುಳ್ಳು ಹೇಳಿರುತ್ತಾರೆ. ಇದು ರೈತರು ಸಭೆಗೆ ಗೈರು ಆಗಿರುವ ಬಗ್ಗೆ ಸ್ಪಷ್ಟ ಸಂದೇಶ ನೀಡುತ್ತದೆ.

ಮತ್ತೆ ರೈತರ ಜಮೀನಿಗೆ ನ್ಯಾಯ ಸಮ್ಮತ ದರ ನಿರ್ಧಾರವಾಗಿರುವುದು ಕಂಡು ಬಂದಿಲ್ಲ. ಈ ಭಾಗದ ರೈತರ ಜಮೀನುಗಳ ಬೆಲೆ 1 ಕುಂಟೆಗೆ 2 ಲಕ್ಷ ರೂಪಾಯಿ ಮಾರಾಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದು ನ್ಯಾಯಸಮ್ಮತ ಬೆಲೆ ನಿಗದಿಮಾಡಿ ನಾಲ್ಕು ಪಟ್ಟು ಹೆಚ್ಚಿಗೆ ಕೊಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ವಿದ್ಯುತ್ ನಿಗಮದ ಅಧಿಕಾರಿಗಳು ರೈತರ ಅನುಮತಿ ಪಡೆಯದೇ, ಲೈನ್‌ಗಳನ್ನು ಚಾರ್ಜ್ ಮಾಡಿರುತ್ತಾರೆ ರೈತರು ಸಭೆಗೆ ಭಾಗವಹಿಸದೇ ಇರುವ ಬಗ್ಗೆ ಮಾಹಿತಿ ಹಕ್ಕಿನ ಪ್ರತಿ ಲಗತ್ತಿಸಿದೆ. ಕೇವಲ ವಿದ್ಯುತ್ ಪ್ರಸರಣಾ ನಿಗಮದ ಅಧಿಕಾರಿಗಳು ನಿರ್ಧಾರ ಮಾಡಿ ಭೂಮಿ ಮೌಲ್ಯವನ್ನು ನಿಗದಿ ಪಡಿಸಿರುವ ಬಗ್ಗೆ ಆದೇಶದ ಪ್ರತಿಯನ್ನೂ ಲಗತ್ತಿಸಿದೆ.

Advertisement

ಅದೇ ರೀತಿ ಮೈಸೂರು ತಾಲೂಕು ಕಡಕೋಳದಿಂದ ವಾಜಮಂಗಲಕ್ಕೆ ಹೋಗುವ 220 ಕೆವಿ ಈ ಯೋಜನೆಗೆ ಸಂಬಂಧಪಟ್ಟಂತೆ ಕೂಡನಹಳ್ಳಿ, ದೇವಲಾಪುರ, ಮಾರಶೆಟ್ಟಳ್ಳಿ, ಜೋರನಹಳ್ಳಿ, ವರುಣ, ವಾಜಮಂಗಲ ಹಳ್ಳಿಗಳ ರೈತರಿಗೂ ಸರಿಯಾದ ಪರಿಹಾರ ನೀಡದೆ ದಬ್ಬಾಳಿಕೆಯಿಂದ ಕೆಲಸ ಮಾಡಲು ಹೋಗಿದ್ದಾರೆ. ಹಳ್ಳಿಗಳಲ್ಲಿರುವ ರೈತರ ಜಮೀನುಗಳ ಅಕ್ಕ ಪಕ್ಕದಲ್ಲಿ ಲೇಔಟ್‌ಗಳು ಇದ್ದು ಒಂದು ಗುಂಟೆಗೆ ₹6 ಲಕ್ಷದಿಂದ 10 ಲಕ್ಷಗಳವರೆಗೆ ಬೆಲೆ ಆಗುತ್ತಿದೆ. ಇಲಾಖೆಯವರು ಕೇವಲ 50,000- 60,000 ರೂ. ಹೇಳುತ್ತಿದ್ದಾರೆ ಆದ್ದರಿಂದ ಒಂದು ಗುಂಟೆಗೆ ಕನಿಷ್ಠ 6 ಲಕ್ಷ ರೂ. ನಿಗದಿ ಮಾಡಬೇಕೆಂದು ಮನವಿ ಮಾಡಿದರು.

ಕೃಷಿ ಪಂಪ್ ಸೆಟ್ ಬಳಕೆ ರೈತರಿಗೆ ಆಧಾರ್ ನೋಂದಣಿ ಮಾಡಿ ಮೀಟರ್ ಅಳವಡಿಕೆ ಕೈ ಬಿಡಬೇಕು. ಅಕ್ರಮ ಸಕ್ರಮ ಯೋಜನೆ ಮುಂದುವರಿಸಿ ಕೃಷಿ ಪಂಪ್ ಸೆಟ್ ವಿದ್ಯುತ್ ಬಳಕೆ ರೈತರಿಗೆ 5000 ರೂ. ಕಟ್ಟಿಸಿಕೊಂಡು ಸಂಪರ್ಕ ಕಲ್ಪಿಸಿ ಕೊಡಬೇಕು. ಹೈ ಪವರ್ ವಿದ್ಯುತ್ ತಂತಿ ಹಾದು ಹೋಗಿರುವ ಜಮೀನುಗಳ ರೈತರಿಗೆ ಕೃಷಿ ಪಂಪ್ ಸೆಟ್ ವಿದ್ಯುತ್ ಬಳಕೆಗೆ ಸರ್ಕಾರದಿಂದಲೇ ಉಚಿತ ಸಂಪರ್ಕ ಕಲ್ಪಿಸಿ ಕೊಡಬೇಕು.

ರೈತರು ತಮ್ಮ ತೋಟ ಹಾಗೂ ಕೃಷಿ ಜಮೀನಿನಲ್ಲಿ ವಾಸದ ಮನೆ ನಿರ್ಮಾಣ ಮಾಡಿ ಕೊಂಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟು ವಿದ್ಯಾರ್ಥಿಗಳಿಗೆ ಹಾಗೂ ವಯೋ ವೃದ್ಧರಿಗೆ ಬೆಳಕಿನ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು. ಮೇಲ್ಕಂಡ ಸಮಸ್ಯೆಗಳ ಬಗ್ಗೆ ಗಂಭೀರತೆಯಿಂದ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಜಿಲ್ಲಾ ಘಟಕದಿಂದ ಒತ್ತಾಯಿಸಿಲಾಯಿತು.

ಇಂದಿನ ನಿಯೋಗದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಗೌರವಾಧ್ಯಕ್ಷ ಧನಗಹಳ್ಳಿ ಕೆಂಡಗಣಪ್ಪ, ಮುಖಂಡರಾದ ವರಕೊಡು ನಾಗೇಶ್, ವಾಜಮಂಗಲ ಮಹಾದೇವ, ಕೂಡನಹಳ್ಳಿ ಸೋಮಣ್ಣ, ದೊಡ್ಡ ಕಾಟೂರು ಮಾದೇವಸ್ವಾಮಿ, ಬನ್ನೂರು ಸೂರಿ, ಸಾತಗಳ್ಳಿ ಬಸವರಾಜು, ವಡ್ಡರಗುಡಿ ಮಾದೇವಸ್ವಾಮಿ, ಚಂದ್ರು, ಪುಟ್ಟಸ್ವಾಮಿ, ಶಿವಣ್ಣ, ಮಹೇಶ್, ಮಲ್ಲಣ್ಣ, ಸೇರಿದಂತೆ 40 ಕ್ಕೂ ಹೆಚ್ಚು ರೈತರು ಇದ್ದರು.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!