ಎಂಎಸ್ಪಿ ಖಾತ್ರಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ: ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್
ಮೈಸೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) SKM (NP) ವತಿಯಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾದ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಇಂದು ಮಧ್ಯಾಹ್ನ ನಗರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ವರ್ಷಾನುಕಾಲ ರೈತರು ಚಳುವಳಿ ನಡೆಸಿ ಸರ್ಕಾರವನ್ನು ಎಚ್ಚರಿಸಿದರು ಗಂಭೀರ ಕ್ರಮ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಇದೇ ಕಾರಣದಿಂದಾಗಿ ರಾಷ್ಟ್ರೀಯ ಸಂಚಾಲಕ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ ಅವರು 131 ದಿನ ಉಪವಾಸ ಸತ್ಯಾಗ್ರಹ ನಡೆಸಿದಾಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಸಮಸ್ಯೆ ಪರಿಹಾರಕ್ಕೆ ವರದಿ ನೀಡುವಂತೆ ಸೂಚಿಸಿದ್ದರು. ಈ ಸಮಿತಿ ರೈತರ ಪರವಾಗಿ ವರದಿ ನೀಡಿದೆ.
ಅದೇ ರೀತಿ ಕೇಂದ್ರ ಸರ್ಕಾರದ ಕೃಷಿ ಅಧ್ಯಯನದ 31 ಜನರ ಸಂಸದೀಯ ಸಮಿತಿ ಸಹ ರೈತರ ಪರವಾದ ವರದಿ ನೀಡಿ ಎಂಎಸ್ಪಿ ಖಾತ್ರಿ ಕಾನೂನು ಜಾರಿಗೆ ಬೆಂಬಲಿಸಿದೆ. ಇದು SKM (NP) ಸಂಘಟನೆಯ ಹೋರಾಟದ ಫಲವಾಗಿ ಆಗಿರುವ ಸಾಧನೆ̤ ಆದರೆ ಕೇಂದ್ರ ಸರ್ಕಾರ ಇದರ ಬಗ್ಗೆ ಇನ್ನು ಯಾವುದೇ ಚಕಾರ ಎತ್ತುತ್ತಿಲ್ಲ. ಆದ್ದರಿಂದ ರೈತರಲ್ಲಿ ಜಾಗೃತಿ ಮೂಡಿಸಲು ಸರ್ಕಾರವನ್ನು ಎಚ್ಚರಿಸಬೇಕಾಗಿದೆ.
ದೇಶದ ರೈತರಿಗೆ ಎಂಎಸ್ಪಿ ಖಾತರಿ ಕಾನೂನು ಇಲ್ಲದ ಕಾರಣ ವರ್ಷಕ್ಕೆ 15 ಲಕ್ಷ ಕೋಟಿ ರೂ.ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಫೆಬ್ರವರಿ 7ರಂದು ಕನ್ಯಾಕುಮಾರಿಯಿಂದ ರೈತ ಜಾಗೃತಿ ಯಾತ್ರೆ ಆರಂಭವಾಗುತ್ತದೆ. ಈ ಯಾತ್ರೆ ಸಾಗುವ ದಾರಿಯಲ್ಲಿ ಸಿಗುವ ಹಳ್ಳಿಗಳ ರೈತರಿಂದ ಸಹಿ ಸಂಗ್ರಹ ಪಡೆದು ಸುಮಾರು 40 ದಿನಗಳ ಈ ಯಾತ್ರೆ ಕಾಶ್ಮೀರ ತಲುಪಿ, ನಂತರ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮಾರ್ಚ್ 19 ರಂದು ದೇಶದ ಎಲ್ಲ ರೈತರ ಬೃಹತ್ ಸಮಾವೇಶ ನಡೆಸಲಾಗುತ್ತದೆ.
ಬಳಿಕ ದೇಶದ ರೈತರಿಂದ ಸಂಗ್ರಹಿಸಿರುವ ಸಹಿ ಸಂಗ್ರಹದ ಮನವಿ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ವರಕುಡ ನಾಗೇಶ್ ಮತ್ತಿತರರು ಇದ್ದರು.
Related









