
- ಕೃಷಿ ಹೊಂಡ ಬಳಿ “ಅಪಾಯ” ಮತ್ತು “ಈಜಬಾರದು” ಎಂಬ ಸೂಚನಾ ಫಲಕ ಅಳವಡಿಸಿ
ಬೆಗಳೂರು ಗ್ರಾಮಾಂತರ: ಬೇಸಿಗೆ ಪ್ರಾರಂಭವಾಗಿದ್ದು, ಕೃಷಿ ಹೊಂಡದಲ್ಲಿ ಮಕ್ಕಳು ಈಜಲು ಮತ್ತು ಜಾನುವಾರುಗಳು ನೀರು ಕುಡಿಯಲು ಬಂದಂತಹ ಸಂದರ್ಭದಲ್ಲಿ ಬೀಳುವ ಸಂಭವವಿದ್ದು, ಈ ಹಿಂದೆ ನಿರ್ಮಿಸಿರುವ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಕೃಷಿ ಇಲಾಖೆ ಉಪ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.
ಕೃಷಿ ಇಲಾಖೆಯ ಬಹುಪಯೋಗಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯನ್ನು 2014-15 ನೇ ಸಾಲಿನಿಂದ ಅನುಷ್ಠಾನ ಮಾಡಲಾಗಿದೆ. ಬೇಸಾಯ ಮಾಡುವ ರೈತರಿಗೆ ನೀರಿನ ಸಂಗ್ರಹಣೆಗಾಗಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಿಲಾಗಿದೆ. ತದನಂತರ ತೋಟಗಾರಿಕಾ/ ನರೇಗಾ ಯೋಜನೆಯಡಿ ಕೂಡ ಕೃಷಿ ಹೊಂಡಗಳ ನಿರ್ಮಾಣವಾಗಿವೆ.
ಈ ಕೃಷಿ ಹೊಂಡಗಳಿಗೆ ಸೂಕ್ತವಾದ ರಕ್ಷಣಾ ಕ್ರಮಗಳನ್ನು ಅಳವಡಿಸದೆ ಇರುವುದರಿಂದ ಕೃಷಿ ಹೊಂಡಗಳಲ್ಲಿ ಜೀವ ಹಾನಿಯಾಗುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಕ್ರಮವನ್ನು ಕೈಗೊಳ್ಳಲಾಗಿದೆ.
ಕೃಷಿ ಹೊಂಡದ ಸುತ್ತಲು ತಂತಿ ಬೇಲಿ / ನೆರಳು ಪರದೆ / ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ ಬೇಲಿ ಆಳವಡಿಸುವುದು ಕಡ್ಡಾಯವಾಗಿರುತ್ತದೆ. ಕೃಷಿ ಹೊಂಡದ ಮುಂದೆ “ಅಪಾಯ” ಮತ್ತು “ಈಜಬಾರದು” ಎಂಬ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಲು ತಿಳಿಸಿದೆ.
ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮವಾಗಿ ಹಗ್ಗದೊಂದಿಗೆ ಟ್ಯೂಬ್‌ಗಳನ್ನು ನಾಲ್ಕೂ ಮೂಲೆಗಳಲ್ಲಿ ಇಳಿ. ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನಲ್ಲಿರುವ ಮುಖ್ಯವಾಗಿ ಮನೆಯ ಸಮೀಪವಿರುವ, ರಸ್ತೆ ಪಕ್ಕದಲ್ಲಿರುವ ಎಲ್ಲ ಕೃಷಿ ಹೊಂಡಗಳಿಗೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು.
ರೈತರು ತಮ್ಮ ಕೃಷಿ ಹೊಂಡಗಳಿಗೆ ಸೂಕ್ತವಾದ ರಕ್ಷಣಾ ಕ್ರಮಗಳನ್ನು ಆಳವಡಿಸಿ ಪ್ರಾಣ ಹಾನಿಯನ್ನು ತಪ್ಪಿಸಲು ಸಹಕರಿಸಬೇಕೆಂದು ಕೃಷಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.