ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಇದೇ ಮಾ. 12 ರಂದು ರಾಜ್ಯಾದ್ಯಂತ ಪಂಜಿನ ಪ್ರತಿಭಟನೆ, ರೈತರ ಆಕ್ರೋಶ ದಿನ ಆಚರಣೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಇಂದು ನಗರದ ಜಲದರ್ಶಿನಿಯಲ್ಲಿ ರಾಜ್ಯದ ರೈತರ ಬರಗಾಲ ಬವಣೆ, ದೆಹಲಿ ರೈತರ ಹೋರಾಟ ಬೆಂಬಲಿಸುವ ಬಗ್ಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಂಜಾಬ್, ಹರಿಯಾಣ,ರೈತರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗಾಗಿ ಪ್ರಬಲ ಹೋರಾಟ ನಡೆಸುತ್ತಿದ್ದರು. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಪೊಲೀಸ್ ಬಲದ ಮೂಲಕ ಚಳವಳಿ ಹತ್ತಿಕ್ಕುವ ಕಾರ್ಯ ನಡೆಸುತ್ತ ಗೋಲಿಬಾರ್ ಮಾಡಿ ಕೊಲ್ಲುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಜತೆ ನಾಲ್ಕು ಸಭೆ ನಡೆಸಿದ ನಾಟಕವಾಡಿ ಸಮಸ್ಯೆ ಬಗ್ಗೆ ನಿರ್ಲಕ್ಷ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯತರ) ರೈತ ಸಂಘಟನೆಯ ಹೋರಾಟ ಬೆಂಬಲಿಸಲು ಮಾ.12ರಂದು ರಾಜ್ಯಾದ್ಯಂತ ರೈತರ ಪಂಜಿನ ಪ್ರತಿಭಟನೆ ರೈತರ ಆಕ್ರೋಶ ದಿನ ಆಚರಿಸಲು ತೀರ್ಮಾನಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ಪಂಜಿನ ಪ್ರತಿಭಟನ ಮೆರವಣಿಗೆ ನಡೆಸುತ್ತಾರೆ ಎಂದು ತಿಳಿಸಿದರು.
ಇನ್ನು ಮಾ.15 ರ ನಂತರ ಧಾರವಾಡದಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ಇನ್ನು ರಾಜ್ಯಾದ್ಯಂತ ಬರಗಾಲದ ಬವಣೆಯಿಂದ ಕುಡಿಯುವ ನೀರು ದನಕರುಗಳಿಗೆ ಮೇವು ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಸರ್ಕಾರ ಕೂಡಲೇ ಸಮರೋಪಾದಿಯಲ್ಲಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಅಬುದಾಬಿಯಲ್ಲಿ ನಡೆದ ಡಬ್ಲ್ಯೂಟಿಒ ಒಪ್ಪಂದ ಮುಕ್ತಾಯವಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ನಾವು ಹಾಗೂ ಹಲವು ದೇಶಗಳ ರೈತ ಪ್ರತಿನಿಧಿಗಳು ಒಪ್ಪಂದ ವಿರೋಧಿಸಿದೆವು ಹಾಗೂ ನಮ್ಮ ದೇಶದ ರೈತರ ಹೋರಾಟವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಕೂಡ ಒಪ್ಪಂದವನ್ನು ವಿರೋಧಿಸಿತು.
ಈ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ತೆರೆಬಿದ್ದಿದೆ, ಇದರಿಂದ ಅನಾವಶ್ಯಕವಾಗಿ ಹೆಚ್ಚುವರಿ ವಿದೇಶದಿಂದ ಆಮದಾಗುವ ಕೃಷಿ ಉತ್ಪನ್ನಗಳ ಆಮದು ನೀತಿಯಿಂದ ದೇಶಿಯ ರೈತರ ಮೇಲೆ ಕೆಟ್ಟ ಪರಿಣಾಮ ಬೀರುವುದು ತಪ್ಪುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಡಬ್ಲ್ಯೂಟಿಒ ಮುಂದಿನ ಸಭೆ ನಡೆಯಲಿದೆ ಅಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ ಎಂದು ಹೇಳಿದರು.
ಬರಗಾಲದ ಕಾರಣ ಸಾಲ ವಸುಲಾತಿ ನಿಲ್ಲಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದಋೂ ಸಹ ಬ್ಯಾಂಕುಗಳು ನಿರ್ಲಕ್ಷ್ಯ ಮಾಡಿ ಬಲವಂತವಾಗಿ ವಸೂಲಿ, ನೋಟಿಸ್ ನೀಡುವುದು ಮುಂದುವರಿಸಿವೆ. ಇದರ ವಿರುದ್ಧ ಪ್ರಬಲ ಹೋರಾಟ ಹಮ್ಮಿಕೊಳಲು ಚರ್ಚೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ನೀಲಕಂಠಪ್ಪ. ತಾಲೂಕು ಅಧ್ಯಕ್ಷರಾದ ಲಕ್ಷ್ಮಿಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ಉಪಾಧ್ಯಕ್ಷ ರಂಗರಾಜು, ಅಂಬಳೆ ಮಂಜುನಾಥ, ಸುನಿಲ್ ಇದ್ದರು.