ಬನ್ನೂರು: ಕೃಷಿ ಪಂಪ್‌ಸೆಟ್ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತರು ಚೆಸ್ಕಾಂ ಉಪವಿಭಾಗ ಬನ್ನೂರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಮೈಸೂರು ಜಿಲ್ಲೆ ಹಾಗೂ ತಿ.ನರಸೀಪುರ ತಾಲೂಕಿನಲ್ಲಿ ಭೀಕರ ಬರಗಾಲ ಕಾಡುತ್ತಿದ್ದು ಹಳ್ಳಿ, ಹಳ್ಳಿಗಳಲ್ಲಿ ಕುಡಿಯುವ ನೀರು ಹಾಗೂ ದನಕರುಗಳಿಗೆ ಮೇವು ಸಿಗುತ್ತಿಲ್ಲ. ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಕಬ್ಬು, ಬಾಳೆ,ಅಡಿಕೆ,ತೆಂಗು ಹಾಗೂ ಇತ್ಯಾದಿ ತರಕಾರಿ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.
ಆದರೂ ಜನ ಪ್ರತಿನಿಧಿಗಳು ಹಾಗೂ ಇಂಧನ ಇಲಾಖೆ ಅಧಿಕಾರಿಗಳು ರೈತರನ್ನು ಕಗ್ಗತ್ತಲಲ್ಲಿ ಇಟ್ಟು ಚುನಾವಣೆ ಗುಂಗಿನಲ್ಲಿ ನಿರತರಾದರೆ ಹೀಗಾದರೆ ರೈತರ ಗತಿಯೇನು ಎಂದು ಪ್ರತಿಭಟನಾ ನಿರತ ರೈತರು ಕಿಡಿಕಾರಿದರು.
ಕೃಷಿ ಪಂಪ್ ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಇದರಿಂದ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾದರೆ ಅವರ ಕುಟುಂಬ ಬೀದಿ ಪಾಲಾಗುತ್ತಿದೆ. ರೈತರ ರಕ್ಷಣೆ ಮಾಡಲು ಹಗಲು
ವೇಳೆ ಬೆಳಗ್ಗೆ 6 ರಿಂದ ಸಂಜೆ 6 ರ ವರಗೆ ವಿದ್ಯುತ್ ಪೂರೈಕೆ ಮಾಡಿ ಅನ್ನದಾತ ರೈತರ ಜೀವ ಉಳಿಸಿ, ಕುಟುಂಬ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಅಕ್ರಮ -ಸಕ್ರಮ ಯೋಜನೆ ಈ ಹಿಂದಿನಂತೆಯೇ ಯಥಾಸ್ಥಿತಿ ಜಾರಿಗೆ ತಂದು ಕೃಷಿ ಪಂಪ್ ಸೆಟ್ ರೈತರ ರಕ್ಷಣೆ ಮಾಡಬೇಕು. ಮನೆ ವಿದ್ಯುತ್ ಬಳಕೆ ದಾರರಿಗೆ 200 ಯುನಿಟ್ ಉಚಿತ ಎಂದು ಗ್ರಾಹಕರಿಗೆ ತಿಳಿಯದ ರೀತಿಯಲ್ಲಿ ಕೆಲವು ನಿರ್ಭಂದ ವಿದಿಸಿ ಆಕ್ರಮವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಟಿಸಿ ಬದಲಾವಣೆ ಹಾಗೂ ದುರಸ್ತಿಗೆ ರೈತರಿಂದ ಹಣ ಸುಲಿಗೆ ಮಾಡುವುದನ್ನು ನಿಲ್ಲಿಸ ಬೇಕು,72 ಗಂಟೆಯೊಳಗೆ (ಮೂರು ದಿನಗಳಲ್ಲಿ) ದುರಸ್ತಿ ಮಾಡಿಕೊಡಬೇಕೆಂದು ಒತ್ತಾಯಿಸಿ, ಖಾಲಿ ಬಿಂದಿಗೆ ಹಿಡಿದು ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಇಲ್ಲವೇ ನೀರು ಕೊಡಿ ಎಂದು ಒತ್ತಾಯಿಸಿದರು.
ತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ತಾಲೂಕು ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಬನ್ನೂರು ಸೂರಿ, B.N. ಶ್ರೀನಿವಾಸ್, ಬಾನಗವಾಡಿ ಬಿ.ಎಲ್, ವೆಂಕಟೇಗೌಡ, ರಾಮಕೃಷ್ಣ,ಜಗದೀಶ್, ಹನುಮನಾಳು,ಚೆನ್ನಮಲ್ಲು, ವರದರಾಜ್ ಕುಂತನಹಳ್ಳಿ ಸ್ವಾಮಿ, ಬೆಟ್ಟಯ್ಯ, ಅತ್ತಹಳ್ಳಿ ಸಿ.ಲಿಂಗಣ್ಣ, ಎ.ಪಿ. ನವೀನ್, ಎ.ಎನ್.ಮಹೇಶ್, ಎ.ಪಿ.ಚೇತನ್, ಅನಿಲ್ ಕುಮಾರ್, ಬನ್ನೂರು ಮೆಡಿಕಲ್ ಮಹೇಶ್, ಹೊನ್ನಯ್ಯ, ವಿನಯ್ ಕುಮಾರ್, ಲೋಕೇಶ್, ಚಾಮನಹಳ್ಳಿ ನಿಂಗೇಗೌಡ, ಕರಿಯಪ್ಪ, ಶಂಕರ್, ಕಿಟ್ಟಣ್ಣ ಇನ್ನು ಮುಂತಾದವರು ಭಾಗವಹಿಸಿದ್ದರು.