ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಉತ್ತರ ಕಾವೇರಿ ನದಿಯ ಸ್ನಾನಘಟ್ಟ ಬಳಿ ರೈತ ಸಂಘ, ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ರೈತರು ಕಾವೇರಿ ನದಿಗೆ ಇಳಿದು ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಮಿತಿಯ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾವೇರಿ ಕಣಿವೆ ಜಲಾಶಯಗಳಿಂದ ನೀರು ಬಿಡುವ ಮುನ್ನ ಎಚ್ಚೆತ್ತು ಕೊಂಡು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗದ ಸರ್ಕಾರ ಜಲಾಶಯ ಭರ್ತಿ ಇಲ್ಲದಿದ್ದರೂ ಏಕಾಏಕಿ ಕಾವೇರಿ ನದಿ ಮೂಲಕ ನೀರು ಬಿಟ್ಟು, ಜಲಾಶಯಗಳನ್ನು ಬರಿದು ಮಾಡಿ, ಕುಡಿಯುವ ನೀರಿಗೂ ತತ್ವಾರ ತಂದು ಇದೀಗ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.
ಇನ್ನು ಮಂಡ್ಯ ಜಿಲ್ಲೆಯ ಶಾಸಕರು, ಸಂಸದರು ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದ ಅವರು, ಕೂಡಲೇ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ತಿಳಿಸಬೇಕು ಇಲ್ಲದಿದ್ದರೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹೊರ ಬಂದು ನಮ್ಮೊಂದಿಗೆ ಸೇರಿ ಪ್ರತಿಭಟನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನ್ಯಾಯಾಲಯಕ್ಕೆ ಹೋಗಲಿ ಎಂದು ಉಡಾಫೆ ಮಾತನಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಸರ್ಕಾರದ ಸಚಿವರ ವಿರುದ್ಧ ಕಿಡಿಕಾರಿದರು.
ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ಕಾವೇರಿ ನದಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಮುನ್ನೆಚ್ಚರಿಕೆ ವಹಿಸಿ ಪ್ರತಿಭಟನಾ ನಿರತ ರೈತರು ನದಿಯಲ್ಲಿ ಜಾರದಂತೆ ಅಗ್ನಿ ಶಾಮಕ ದಳ ಸಿಬ್ಬಂದಿಗಳೊಂದಿಗೆ ಹಗ್ಗದ ಸಹಾಯದಿಂದ ಸುತ್ತುವರಿದು ರಕ್ಷಣೆ ನೀಡಿದರು. 50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸಿಪಿಐ ಪ್ರಕಾಶ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು.
ಮೇಳಾಪುರ ಜಯರಾಮ, ಹನುಮಂತನಗರದ ಸ್ವಾಮಿ, ಹೊಸೂರಿನ ಶಿವರಾಜು, ಹನಿಯಂಬಾಡಿ ನಾಗರಾಜು, ಮಹದೇವಪುರ ಕೃಷ್ಣ, ಹೊಸ ಉಂಡವಾಡಿ ಮಹದೇವು, ಪುಟ್ಟೇಗೌಡ, ಪಾಲಹಳ್ಳಿ ರಾಮಚಂದ್ರ, ಮಹದೇವು, ಕೂಡ್ಲುಕುಪ್ಪೆ ಸ್ವಾಮಿ ಗೌಡ, ಪುಟ್ಟೇಗೌಡ, ರಾಮಕೃಷ್ಣ, ಬಲ್ಲೇನಹಳ್ಳಿ ಮಹೇಶ್, ಧರಸಗುಪ್ಪೆ ಮಹೇಶ, ಚಂದಗಾಲು ಶಿವರಾಮ, ಚಿಂದಗಿರಿ ಕೊಪ್ಪಲು ರಾಮಚಂದ್ರ ಇತರರಿದ್ದರು.