ಕೊಳ್ಳೇಗಾಲ: ಜನರಲ್ಲಿ ಆತಂಕ ಸೃಷ್ಟಿಸಿದ್ದ ನರಭಕ್ಷಕ ಚಿರತೆಯೊಂದು ಶನಿವಾರ ತಡರಾತ್ರಿ ಬೋನಿಗೆ ಬಿದ್ದಿದೆ. ರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಭಾನುವಾರ ಮುಂಜಾನೆ ಗಸ್ತಿನಲ್ಲಿದ್ದ ಸಿಬ್ಬಂದಿಯ ಗಮನಕ್ಕೆ ಬಂದಿದೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿಯ ಸಿದ್ದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಇದು ಹನೂರು ತಾಲೂಕಿನ ಕಗ್ಗಲಿಗುಂದಿಯಲ್ಲಿ ಬಾಲಕಿ ಹಾಗೂ ಕಂಚಗಳ್ಳಿ ಗ್ರಾಮದಲ್ಲಿ ರೈತರೊಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯೇ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.
ಬಾಳಕಿ ಹಾಗೂ ರೈತನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಅರಣ್ಯ ಇಲಾಖೆ ಕಳೆದ 19 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಅದರಂತೆ ಚಿರತೆ ಬೋನಿಗೆ ಬಿದ್ದಿದ್ದು, ಆತಂಕ ತುಸು ದೂರಾಗಿದೆ. ಆದರೆ, ಇನ್ನೆಷ್ಟು ಚಿರತೆಗಳಿವೆಯೋ ಎಂಬ ಭಯವು ಇನ್ನೂ ಕಾಡುತ್ತಿದೆ.
ಕಗ್ಗಲಿಗುಂದಿ ಮತ್ತು ಕಂಚಗಳ್ಳಿ ಪ್ರದೇಶದಿಂದ ಹೊರ ಹೋಗಿದ್ದ ಚಿರತೆ, ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಓಡಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಸಿದ್ದೇಶ್ವರಬೆಟ್ಟದಲ್ಲಿ ಚಿರತೆಯೊಂದು ಓಡಾಡುತ್ತಿರುವ ವಿಡಿಯೋ ತುಣುಕು ಇತ್ತೀಚೆಗೆ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿತ್ತು. ಬಾಲಕಿ ಮತ್ತು ರೈತನ ಮೇಲೆ ದಾಳಿ ನಡೆಸಿದ್ದ ಚಿರತೆ ಇದಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದರು.
ಕಾರ್ಯಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಆಯಕಟ್ಟಿನ ಆರು ಕಡೆಗಳಲ್ಲಿ ಬೋನ್ಗಳನ್ನು ಅಳವಡಿಸಿತ್ತು. ಜತೆಗೆ ಅದರ ಚಲನವಲನಗಳ ಅಧ್ಯಯನಕ್ಕಾಗಿ 30 ಕ್ಯಾಮೆರಾಗಳನ್ನು ಅಳವಡಿಸಿತ್ತು.